ADVERTISEMENT

ಒಡಿಶಾ | ಇವಿಎಂಗೆ ಹಾನಿ: ಬಿಜೆಪಿ ಅಭ್ಯರ್ಥಿ ಬಂಧನ

ಪಿಟಿಐ
Published 26 ಮೇ 2024, 14:16 IST
Last Updated 26 ಮೇ 2024, 14:16 IST
ಇವಿಎಂ
ಇವಿಎಂ   

ಭುವನೇಶ್ವರ: ಮತ ಹಾಕಲು ಹೆಚ್ಚು ಕಾಲ ಸರತಿಯಲ್ಲಿ ನಿಲ್ಲಬೇಕಾಗಿ ಬಂದುದಕ್ಕೆ ಕೋಪಗೊಂಡ ಒಡಿಶಾದ ಖುರ್ದಾ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯೊಬ್ಬ ಇವಿಎಂಗೆ ಹಾನಿ ಮಾಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇವಿಎಂ ಸರಿಯಾಗಿ ಕಾರ್ಯನಿರ್ವಹಿಸೇ ಇದ್ದುದರಿಂದ ಮತದಾನ ಕೊಂಚ ತಡವಾಗಿತ್ತು. ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಲು ಹೋಗಿದ್ದ ಖುರ್ದಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಶಾಂತ್ ಜಗದೇವ್ ಅದರಿಂದ ಕೋಪಗೊಂಡು ಮತಯಂತ್ರಕ್ಕೆ ಹಾನಿ ಮಾಡಿದ್ದಾರೆ. ಬೆಗುನಿಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 114ರಲ್ಲಿ ಶನಿವಾರ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ಹೇಳಿದ್ದಾರೆ. ನಂತರ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. 

ADVERTISEMENT

ಬಿಜೆಪಿ ಮುಖಂಡರು ಪ್ರಶಾಂತ್ ಅವರು ಇವಿಎಂ ಹಾನಿ ಮಾಡಿದ ಆರೋಪವನ್ನು ನಿರಾಕರಿಸಿದ್ದು, ಇದು ರಾಜಕೀಯಪ್ರೇರಿತ ಬಂಧನ ಎಂದಿದ್ದಾರೆ. ‘ಮತಗಟ್ಟೆ ಅಧಿಕಾರಿ ಮತದಾರರೊಂದಿಗೆ ದುರ್ವರ್ತನೆ ತೋರಿದ್ದು, ಶಾಸಕರೊಂದಿಗೂ ಅದೇ ರೀತಿ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ಆಡಳಿತಾರೂಢ ಬಿಜೆಡಿಯು ಪ್ರಶಾಂತ್ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.