ADVERTISEMENT

ಮೋದಿ ಧ್ಯಾನದ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿವೆ: ಅಣ್ಣಾಮಲೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2024, 9:31 IST
Last Updated 1 ಜೂನ್ 2024, 9:31 IST
ಅಣ್ಣಾಮಲೈ
ಅಣ್ಣಾಮಲೈ   

ತಿರುವಣ್ಣಾಮಲೈ: ಕನ್ಯಾಕುಮಾರಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಶನಿವಾರ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಿರೋಧ ಪಕ್ಷಗಳಿಗೆ ಏನು ಮಾಡಬೇಕೆಂದು ತಿಳಿಯದೆ ಮೋದಿ ಅವರು ಧ್ಯಾನದ ಬಗ್ಗೆ ರಾಜಕೀಯ ಮಾಡುತ್ತಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರಿಸುಮಾರು ಎರಡು ತಿಂಗಳ ಕಾಲ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ 45 ತಾಸುಗಳ ಧ್ಯಾನವನ್ನು ಗುರುವಾರ ಸಂಜೆ ಆರಂಭಿಸಿದ್ದರು. ಧ್ಯಾನವು ಇಂದು ಸಂಜೆ ಮುಕ್ತಾಯಗೊಳ್ಳಲಿದೆ.

ADVERTISEMENT

‘ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಗೆ ಖಾಸಗಿ ಕಾರ್ಯಕ್ರಮದ ಭಾಗವಾಗಿ ಬಂದಿದ್ದಾರೆ. ಯಾವೊಬ್ಬ ಬಿಜೆಪಿ ಕಾರ್ಯಕರ್ತನು ಅಲ್ಲಿಗೆ ಹೋಗಿಲ್ಲ. ವಿವೇಕಾನಂದ ಸ್ಮಾರಕವು ಯಾರೊಬ್ಬರ ಭೇಟಿಗೂ ಮುಕ್ತವಾಗಿರುವ ಖಾಸಗಿ ಸ್ಥಳವಾಗಿದ್ದು,, ಸರ್ಕಾರ ಮತ್ತು ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದಿದ್ದಾರೆ.

ಪ್ರಧಾನಿ ಮೋದಿ ಒಂದು ಕಡೆ ಧ್ಯಾನ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾರ್ವಜನಿಕರು ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಯಾರನ್ನೂ ತಡೆದಿಲ್ಲ. ವಿಪಕ್ಷ ನಾಯಕರಿಗೆ ಏನು ಮಾಡಬೇಕೆಂದು ತಿಳಿಯದೆ ಅನಗತ್ಯ ರಾಜಕೀಯ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ‘ದೆಹಲಿಯಲ್ಲಿ ನಡೆಯುವ ‘ಇಂಡಿಯಾ’ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆ ಯಾವುದೇ ಪಕ್ಷದ ಪ್ರಮುಖ ನಾಯಕರು ಭಾಗವಹಿಸುತ್ತಿಲ್ಲ. ಎರಡನೇ ಹಂತದ ನಾಯಕರು ಮಾತ್ರ ಭಾಗವಹಿಸಿದ್ದಾರೆ. ಮತಗಟ್ಟೆ ಸಮೀಕ್ಷೆ ಕುರಿತ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದೆ‘ ಎಂದು ಕಿಡಿಕಾರಿದ್ದಾರೆ.

ಲೋಕಸಭೆ ಚುನಾವಣೆಗೆ ಏಳನೇ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ಜೂನ್‌ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.