ADVERTISEMENT

ನಿರ್ಗಮಿಸಲಿರುವ ಪ್ರಧಾನಿ ಮೋದಿಗೆ ಹಿಂದೂ–ಮುಸ್ಲಿಂ ರಾಜಕೀಯವೇ ಅಜೆಂಡಾ: ಕಾಂಗ್ರೆಸ್

ಪಿಟಿಐ
Published 15 ಮೇ 2024, 9:27 IST
Last Updated 15 ಮೇ 2024, 9:27 IST
<div class="paragraphs"><p>ಜೈರಾಮ್ ರಮೇಶ್ ಮತ್ತು ನರೇಂದ್ರ ಮೋದಿ</p></div>

ಜೈರಾಮ್ ರಮೇಶ್ ಮತ್ತು ನರೇಂದ್ರ ಮೋದಿ

   

ನವದೆಹಲಿ: ನಿರ್ಗಮಿತ ಪ್ರಧಾನಿಗೆ ಹಿಂದೂ-ಮುಸ್ಲಿಂ ರಾಜಕೀಯ ಹೊರತುಪಡಿಸಿ ಯಾವುದೇ ಅಜೆಂಡಾ ಇಲ್ಲ ಎಂದು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ನರೇಂದ್ರ ಮೋದಿ ಅವರು ‘ಮೋದಿ ಕಿ ಗ್ಯಾರಂಟಿ’ ನೆಲಕಚ್ಚಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ‘400’ ಸ್ಥಾನಗಳು ಬರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಯಾವತ್ತೂ ನಾನು ಹಿಂದೂ ಮತ್ತು ಮುಸ್ಲಿಂ ಎಂದು ಭೇದಭಾವದ ರಾಜಕೀಯ ಮಾಡುತ್ತೇನೋ ಅಂದು ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬರ್ಥದ ಹೇಳಿಕೆ ನೀಡಿದ್ದ ಮೋದಿಯವರು, ತಾನೆಂದೂ ನಿರ್ದಿಷ್ಟವಾಗಿ ಮುಸ್ಲಿಮರನ್ನು ಉಲ್ಲೇಖಿಸಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದೆ.

'ಹೊರಹೋಗುವ ಪ್ರಧಾನಿ (ಮೋದಿ) ಎಷ್ಟು ದೊಡ್ಡ ಸುಳ್ಳುಗಾರ' ಎಂಬುದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ತಾವು ಹಿಂದೂ-ಮುಸ್ಲಿಂ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ ಎಂಬ ಮೋದಿಯವರ ಇತ್ತೀಚಿನ ಹೇಳಿಕೆಯು ಅವರು ಸುಳ್ಳು ಹೇಳುವಲ್ಲಿ ಪ್ರತಿದಿನ ತಲುಪುವ ಹೊಸ ಆಳ– ಸುಳ್ಳು ಹೇಳುವಲ್ಲಿ ಪ್ರತಿದಿನ ತಲುಪುವ ಕನಿಷ್ಠ ಮಟ್ಟ ಎಷ್ಟು ಎಂಬುದನ್ನು ತೋರಿಸಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಆಯೋಗ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರದ ಉದ್ದಕ್ಕೂ, 'ನಿರ್ಗಮಿತ ಪ್ರಧಾನಿ' ಹಿಂದೂ-ಮುಸ್ಲಿಂ ರಾಜಕೀಯವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾವನ್ನು ಹೊಂದಿಲ್ಲ ಎಂದು ಮೋದಿ ವಿರುದ್ಧ ರಮೇಶ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.