ADVERTISEMENT

AAP ಸರ್ಕಾರ ರಚನೆಯಾದ ಬಳಿಕ ಜನರಿಗೆ ಪ್ರತಿ ತಿಂಗಳು ₹18,000 ಉಳಿಯುತ್ತಿದೆ: ಚಡ್ಡಾ

ಪಿಟಿಐ
Published 23 ಮೇ 2024, 3:33 IST
Last Updated 23 ಮೇ 2024, 3:33 IST
<div class="paragraphs"><p>ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡ ರಾಘವ್ ಚಡ್ಡಾ</p></div>

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡ ರಾಘವ್ ಚಡ್ಡಾ

   

ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ರಚನೆಯಾದಾಗಿನಿಂದ ಜನ ಸಾಮಾನ್ಯರಿಗೆ ಪ್ರತಿ ತಿಂಗಳು ಸರಾಸರಿ ₹ 18,000 ಉಳಿಯುತ್ತಿದೆ ಎಂದು ಎಎಪಿ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ ಬುಧವಾರ ಹೇಳಿದ್ದಾರೆ.

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡ ಚಡ್ಡಾ, ತಮ್ಮ ಪಕ್ಷವು ಜನ ಸಾಮಾನ್ಯರನ್ನು ಶಾಸಕ, ಸಂಸದ, ಸಚಿವರನ್ನಾಗಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜನರ ಸೇವೆಗೆ ಸಿದ್ಧರಿರುವ ವಿದ್ಯಾವಂತರನ್ನು ಚುನಾಯಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಅವರು, 'ಎಎಪಿಯು ಸಾಮಾನ್ಯ ಕುಟುಂಬದವರನ್ನು ಶಾಸಕರು, ಸಂಸದರು ಮತ್ತು ಸಚಿವರನ್ನಾಗಿ ಮಾಡಿದೆ. ಕುಲದೀಪ್‌ ಕುಮಾರ್‌ ಹಾಗೂ ನಾನೇ ಅದಕ್ಕೆ ಉದಾಹರಣೆ' ಎಂದು ಪ್ರತಿಪಾದಿಸಿದ್ದಾರೆ.

'ಜನರಿಗೆ ಹೊರೆಯಾಗುತ್ತಿರುವ ವೆಚ್ಚಗಳಿಗೆ ಕಡಿವಾಣ ಹಾಕುವುದಕ್ಕಾಗಿ ಎಎಪಿ ಸರ್ಕಾರ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಮ್ಮ ಪಕ್ಷವು ಜನರ ಆಶೀರ್ವಾದ, ಪ್ರೀತಿ ಮತ್ತು ಮತವನ್ನು ಕೇಳುತ್ತಿದೆ' ಎಂದಿದ್ದಾರೆ.

'ಜನರು ವಿದ್ಯುತ್, ನೀರು, ಔಷಧ ಮತ್ತು ಮಕ್ಕಳ ಶಾಲಾ ಶುಲ್ಕವಾಗಿ ಪ್ರತಿ ತಿಂಗಳೂ ವೆಚ್ಚ ಮಾಡುತ್ತಿದ್ದ ಸರಾಸರಿ ₹ 18,000, ದೆಹಲಿಯಲ್ಲಿ ಎಎಪಿ ಸರ್ಕಾರ ರಚನೆಯಾದಾಗಿನಿಂದ ಉಳಿತಾಯವಾಗುತ್ತಿದೆ. ಮಹಿಳೆಯರು ಬಸ್‌ ಪ್ರಯಾಣದ ವೆಚ್ಚವನ್ನೂ ಉಳಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. ಹಾಗೆಯೇ, ಮಹಿಳೆಯರು ಕೇಜ್ರಿವಾಲ್‌ ಸರ್ಕಾರದಿಂದ ಶೀಘ್ರದಲ್ಲೇ ತಲಾ ₹ 1,000 ಪಡೆಯಲಿದ್ದಾರೆ ಎಂದೂ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕುಲದೀಪ್‌ ಅವರಿಗೆ ಮತ ನೀಡುವಂತೆ ಮನವಿ ಮಾಡಿದ ಚಡ್ಡಾ, 'ಕುಲದೀಪ್‌ ಕುಮಾರ್‌ ನಿಮ್ಮಲ್ಲೇ ಒಬ್ಬರು. ಅವರು ಎಲ್ಲಿಗೂ ಹೋಗುವುದಿಲ್ಲ. ನಿಮ್ಮ ಕೆಲಸಗಳನ್ನು ಮಾಡದಿದ್ದರೆ, ನಾವು ಅವರ ಕಿವಿ ಹಿಂಡಿ ಕೆಲಸ ಮಾಡಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

'ಸಂಸತ್ತಿನಲ್ಲಿ ಕೂಗಾಡಿ ನನ್ನ ಗಂಟಲು ನೋವಾಗುತ್ತಿದೆ. ನನಗೆ ಮತ್ತೊಬ್ಬ ಸಹೋದ್ಯೋಗಿ ಬೇಕಾಗಿದ್ದಾರೆ. ಸಹೋದರ ಕುಲದೀಪ್‌ ಅವರನ್ನು ಗೆಲ್ಲಿಸಿ. ಜನಸಾಮಾನ್ಯರ ಧ್ವನಿಯನ್ನು ಗಟ್ಟಿಗೊಳಿಸಿ' ಎಂದು ಕರೆ ನೀಡಿದ್ದಾರೆ.

ಎಎಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದಿರುವ ಅವರು, 'ಲೋಕಸಭಾ ಚುನಾವಣೆಯ ವೇಳೆ ರಾಹುಲ್‌ ಗಾಂಧಿ ಅವರು 'ಪೊರಕೆ' ಗುರುತಿಗೆ ಮತ ನೀಡಲಿದ್ದಾರೆ. ಅದೇ ರೀತಿ, ಕೇಜ್ರಿವಾಲ್‌ ಅವರು 'ಹಸ್ತ'ದ ಗುರುತನ್ನು ಆಯ್ಕೆ ಮಾಡಲಿದ್ದಾರೆ. ಇದು ಇಂಡಿಯಾ ಬಣ' ಎಂದು ಒತ್ತಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮೊದಲೇ ಮೈತ್ರಿ ಮಾಡಿಕೊಂಡಿರುವ ಎಎಪಿ ಹಾಗೂ ಕಾಂಗ್ರೆಸ್‌, ದೆಹಲಿಯಲ್ಲಿ ಸೀಟು ಹಂಚಿಕೊಂಡಿವೆ. ಇಲ್ಲಿನ 7 ಕ್ಷೇತ್ರಗಳ ಪೈಕಿ ಎಎಪಿ ನಾಲ್ಕು ಹಾಗೂ ಕಾಂಗ್ರೆಸ್‌ ಮೂರು ಕಡೆ ಸ್ಪರ್ಧಿಸಿವೆ. ಮೇ 25ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.