ADVERTISEMENT

J&K: 370 ರದ್ದತಿ ಸಂತಸ ತಂದಿದ್ದರೆ ಕಾಶ್ಮೀರದ ಜನ BJPಗೆ ಮತ ಹಾಕುತ್ತಾರೆ: ಒಮರ್

ಪಿಟಿಐ
Published 4 ಏಪ್ರಿಲ್ 2024, 12:29 IST
Last Updated 4 ಏಪ್ರಿಲ್ 2024, 12:29 IST
<div class="paragraphs"><p> ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ಕ್ರಮದಿಂದ ಈ ಭಾಗದ ಜನರು ಸಂತಸಗೊಂಡಿದ್ದರೆ ಅವರು ಬಿಜೆಪಿಗೆ ಮತ ಹಾಕಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ವಿಷಯವನ್ನು ಜನರು ನಿರ್ಧರಿಸಿ ಅದರ ಸಂದೇಶವನ್ನು ದೆಹಲಿಗೆ ಕಳುಹಿಸಬೇಕು. ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ 2019ರ ಆ. 5ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಇಲ್ಲಿನ ಜನರು ಸಂತುಷ್ಟರಾಗಿದ್ದರೆ, ಅವರು ಎಂದಿಗೂ ನ್ಯಾಷನಲ್ ಕಾನ್ಫರೆನ್ಸ್‌ಗೆ ಮತ ಹಾಕಬಾರದು’ ಎಂದಿದ್ದಾರೆ.

ADVERTISEMENT

‘ಒಂದೊಮ್ಮೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಿಂದ ಸಂತುಷ್ಟರಾಗದಿದ್ದರೆ, ಅವರೆಲ್ಲರೂ ಮನೆಯಿಂದ ಹೊರಬಂದು ನ್ಯಾಷನಲ್ ಕಾನ್ಫರೆನ್ಸ್‌ ಅಭ್ಯರ್ಥಿಗೆ ಮತ ಹಾಕಬೇಕು’ ಎಂದು ಒಮರ್ ಹೇಳಿದ್ದಾರೆ.

‘ನಮ್ಮನ್ನು ಹೇಗೆ ವಂಚಿಸಿದರು ಹಾಗೂ ಅವಮಾನಿಸಿದರು ಎಂಬುದನ್ನು ಜನರು ಅರಿಯಬೇಕು. ಅದರ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಕುರಿತು ನಮ್ಮ ಧ್ವನಿ ಎತ್ತಬೇಕು. ಶ್ರೀನಗರದಲ್ಲಿ ಸೃಷ್ಟಿಯಾಗಿರುವ ರಾಜಕೀಯ ನಿರ್ವಾತವನ್ನು ತುಂಬುವ ಅವಕಾಶ ರಾಜ್ಯದ ಜನರಿಗೆ ಸಿಕ್ಕಿದೆ. ಆ ನಿಟ್ಟಿನಲ್ಲಿ ಯೋಚಿಸಬೇಕು’ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಆ. 5ರಂದು ರದ್ದುಗೊಳಿಸಿತ್ತು. ಜತೆಗೆ ರಾಜ್ಯವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿಯಿತು.

‘ಜಮ್ಮು ಹಾಗೂ ಉಧಮ್‌ಪುರ–ಕಟುವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡುತ್ತೇನೆ. ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಗೆಲುವಿಗೆ ಕೆಲಸ ಮಾಡುವುದಾಗಿ ಕಾಂಗ್ರೆಸ್ ಕೂಡಾ ಭರವಸೆ ನೀಡಿದೆ’ ಎಂದು ಒಮರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.