ಕೋಲ್ಕತ್ತ: ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಅಡಿಯಿಟ್ಟಿವೆ. ಇಂದು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ರ್‍ಯಾಲಿ ಕೈಗೊಂಡು ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, ‘ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜನರ ನಡುವೆ ಇರಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲಿನ ಜನರು ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಹೆಚ್ಚು ಬೆಂಬಲಿಸಿದ್ದಾರೆ. ಮತ್ತೆ ಬಿಜೆಪಿಯಲ್ಲಿ ನಂಬಿಕೆ ಇಡುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಪ್ರಧಾನಿ ಮೋದಿ ಮಾತ್ರವಲ್ಲದೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಇಂದು ರ್‍ಯಾಲಿ ನಡೆಸಿ, ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಆದರೆ ಪ್ರಧಾನಿಗಳ ಸಾರ್ವಜನಿಕ ಸಭೆಯು ಮಮತಾ ಅವರ ಸಾರ್ವಜನಿಕ ಸಭೆ ನಡೆಯುವ ಸ್ಥಳದಿಂದ 30 ಕಿ. ಮೀ ದೂರದಲ್ಲಿ ಆಯೋಜನೆಯಾಗಿದೆ.
ಇಬ್ಬರು ಪ್ರಮುಖ ನಾಯಕರ ಚುನಾವಣಾ ರ್‍ಯಾಲಿ ಒಂದೇ ಜಿಲ್ಲೆಯಲ್ಲಿ ಇರುವ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರು ಬಹು ಹಂತದ ಭದ್ರತೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.