ಕನ್ಯಾಕುಮಾರಿ: ಬರೋಬ್ಬರಿ 45 ಗಂಟೆಗಳ ಧ್ಯಾನ ಕೈಗೊಳ್ಳಲು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ತಲುಪಿದರು.
ಲೋಕಸಭೆಯ 7ನೇ ಮತ್ತು ಅಂತಿಮ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬೆನ್ನಲ್ಲೇ ಮೋದಿ ದೀರ್ಘ ಧ್ಯಾನ ಆರಂಭಿಸಿದ್ದಾರೆ.
131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಕೈಗೊಂಡಿದ್ದ ಧ್ಯಾನ ಮಂಟಪದಲ್ಲಿ ಜೂನ್ 1ರವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ.
ತಿರುವನಂತಪುರದಿಂದ ಕನ್ಯಾಕುಮಾರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ನೇರ ಭಗವತಿ ಅಮ್ಮನ್ ದೇಗುಲಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಧೋತಿ ಮತ್ತು ಬಿಳಿ ಶಾಲು ಹಾಕಿದ್ದ ಮೋದಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗರ್ಭ ಗುಡಿಯ ಪ್ರದಕ್ಷಿಣೆ ಹಾಕಿದರು. ಅರ್ಚಕರು ವಿಶೇಷ ಆರತಿ ಬೆಳಗಿ, ಪ್ರಸಾದದ ಜೊತೆಗೆ ಶಾಲು ಮತ್ತು ದೇವಿಯ ಭಾವಚಿತ್ರವನ್ನು ನೀಡಿದರು.
ಬಳಿಕ, ವಿವೇಕಾನಂದ ಸ್ಮಾರಕಕ್ಕೆ ನಾವೆಯ ಮೂಲಕ ತೆರಳಿದ ಅವರು, ರಾಮಕೃಷ್ಣ ಪರಮಹಂಸ, ಶಾರದಾದೇವಿ ಅವರ ಭಾವಚಿತ್ರಗಳಿಗೆ ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಅವರು ‘ಧ್ಯಾನ ಮಂಟಪ’ದಲ್ಲಿ ಇರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಗೌರವ ಸಲ್ಲಿಸಿದರು. ಅದಾದ ನಂತರ ಧ್ಯಾನ ಆರಂಭಿಸಿದರು.
ವಿವೇಕಾನಂದ ಸ್ಮಾರಕಕ್ಕೆ ಮೋದಿ ಅವರು ನೀಡಿರುವ ಭೇಟಿಯು ‘ಸಂಪೂರ್ಣವಾಗಿ ಖಾಸಗಿ’ ಎಂದು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಜೂನ್ 1ರಂದು ಇಲ್ಲಿಂದ ವಾಪಸ್ಸಾಗುವ ಮೊದಲು ಮೋದಿ ಅವರು ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದು ವಿವೇಕಾನಂದ ಸ್ಮಾರಕದ ಸನಿಹದಲ್ಲಿಯೇ ಇದೆ.
ಮೋದಿ ಅವರ ಭೇಟಿಯನ್ನು ವಿರೋಧಿಸಿ ಮದುರೈನಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಲವರು ‘ಗೋಬ್ಯಾಕ್‌ಮೋದಿ’ ಹ್ಯಾಷ್‌ಟ್ಯಾಗ್ ಇದ್ದ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ.
ಚುನಾವಣಾ ಪ್ರಚಾರದ ಬಳಿಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಪ್ರಧಾನಿ ಮೋದಿ ರೂಢಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ಅವರು ಕೇದಾರನಾಥ ಮತ್ತು 2014ರ ಪ್ರಚಾರದ ಬಳಿಕ ಶಿವಾಜಿಯ ಪ್ರತಾಪಗಢಕ್ಕೆ ತೆರಳಿದ್ದರು.
ಏಪ್ರಿಲ್ 19ರಿಂದ ಆರಂಭವಾಗಿ ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಪೈಕಿ 6 ಹಂತಗಳು ಮುಗಿದಿದೆ. 7ನೇ ಹಂತದ ಚುನಾವಣೆಯ ಮತದಾನ ಜೂನ್ 1ರಂದು ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸುಮಾರು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಗಳೂ ಕಣ್ಗಾವಲು ಇಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.