ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆ ಶನಿವಾರ ಸಂಜೆ ಆರಂಭಗೊಂಡಿದೆ.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಿದ್ದಾರೆ. ಸಮಿತಿಯ ಸದಸ್ಯರು ಸಭೆಗೆ ಆಕಾಂಕ್ಷಿಗಳ ಪಟ್ಟಿಯನ್ನು ಓದಿ ಹೇಳಿದರು. ಅಂತಿಮ ಆಯ್ಕೆ ವರಿಷ್ಠರದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇದಕ್ಕೂ ಪೂರ್ವದಲ್ಲಿ 291 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಮಿತಿಯು ಎರಡು ಬಾರಿ ಸಭೆ ನಡೆಸಿತ್ತು. ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಕೇರಳ ಹಾಗೂ ತೆಲಂಗಾಣದ ರಾಜ್ಯಗಳಲ್ಲಿರುವ ಕ್ಷೇತ್ರಗಳ ಕುರಿತು ಚರ್ಚೆ ನಡೆದಿತ್ತು.
ಈ ರಾಜ್ಯಗಳ ಇನ್ನೂ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಭೋಜಪುರಿ ಗಾಯಕ ಪವನ್ ಸಿಂಗ್ ಸೇರಿದಂತೆ ಕನಿಷ್ಠ ಮೂವರು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ.
ಈವರೆಗೂ ಮುಂಚೂಣಿ ಹೆಸರುಗಳಾದ ನರೇಂದ್ರ ಮೋದಿ, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಅವರು ಈ ಹಿಂದೆ ಸ್ಪರ್ಧಿಸಿದ್ದ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ.
543 ಲೋಕಸಭಾ ಕ್ಷೇತ್ರಗಳಿಗೆ ಏ. 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.