ನವದೆಹಲಿ: ಭಾರತವನ್ನು ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ನಿರ್ಗಮಿತ ಸಚಿವ ಅನುರಾಗ್ ಠಾಕೂರ್ ಭಾನುವಾರ ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಈ ಬಾರಿ ಸಚಿವ ಸ್ಥಾನ ತಪ್ಪುವುದು ಖಚಿತವಾಗುತ್ತಿದ್ದಂತೆ ಅವರು ಈ ಹೇಳಿಕೆ ನೀಡಿದ್ದಾರೆ.
ಮೋದಿ ಹಾಗೂ ಅವರ ಸಂಪುಟ ಸಚಿವರಿಗೆ ಅಭಿನಂದನೆ ಹೇಳಿರುವ ಠಾಕೂರ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಚಿವ ಸಂಪುಟಕ್ಕೆ ಆಯ್ಕೆಯಾಗಿರುವ ಎಲ್ಲರೂ 'ಅತ್ಯಂತ ಸಮರ್ಥರು'. ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಅವರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಠಾಕೂರ್, ಹಿಮಾಚಲ ಪ್ರದೇಶದ ಹಮೀರಪುರ ಕ್ಷೇತ್ರದಿಂದ ಸಂಸತ್ತಿಗೆ ಪುನರಾಯ್ಕೆಯಾಗಿದ್ದಾರೆ.
'ನಾನು ಮೊದಲು ಪಕ್ಷದ ಕಾರ್ಯಕರ್ತ. ಹಿಮಾಚಲ ಪ್ರದೇಶದ ಹಮೀರಪುರ ಕ್ಷೇತ್ರದ ಜನರು ನನ್ನನ್ನು ಸತತ ಐದನೇ ಸಲ ಸಂಸತ್ತಿಗೆ ಚುನಾಯಿಸಿದ್ದಾರೆ. ಲೋಕಸಭೆಗೆ 5 ಬಾರಿ ಆಯ್ಕೆಯಾಗುವುದೇ ಅತ್ಯಂತ ದೊಡ್ಡ ಗೌರವದ ಸಂಗತಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಪುಟದಿಂದ ಕೈಬಿಟ್ಟಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಲೋಕಸಭೆಗೆ ಐದು ಬಾರಿ ಸ್ಪರ್ಧಿಸುವ ಅವಕಾಶವನ್ನು ಬಿಜೆಪಿ ನನಗೆ ನೀಡಿದೆ. ಇದಕ್ಕಿಂತಲೂ ದೊಡ್ಡ ಅವಕಾಶವಿರಲು ಸಾಧ್ಯವಿಲ್ಲ. ಈ ಹಿಂದೆಯೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅದನ್ನು ಮಂದುವರಿಸುತ್ತೇನೆ. ನಾವು ಶ್ರಮಿಸುತ್ತಿರುವುದೇ, ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವುದಕ್ಕಾಗಿ. ದೇಶ ಮಹತ್ವದ್ದು, ಮೋದಿ ಸರ್ಕಾರ ಮುಖ್ಯ, ದೇಶದ ಪ್ರಗತಿ ಅತ್ಯಗತ್ಯವಾದದ್ದು. ಹಾಗಾಗಿ ನಾವೆಲ್ಲ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದೇವೆ' ಎಂದು ವಿವರಿಸಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶವು ಹೊಸ ಎತ್ತರಕ್ಕೆ ಏರಲಿದೆ. ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಇಂದು (ರಾತ್ರಿ 7.15ಕ್ಕೆ) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.