ADVERTISEMENT

ಸೆಂಥಿಲ್‌ಗೆ ಜಯ; ಅಣ್ಣಾಮಲೈಗೆ ಅಪಜಯ: ಕರ್ನಾಟಕದ ಮಾಜಿ ಅಧಿಕಾರಿಗಳ ರಾಜಕೀಯ ಪಯಣಗಾಥೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:14 IST
Last Updated 5 ಜೂನ್ 2024, 16:14 IST
   

ಬೆಂಗಳೂರು: ತಮಿಳುನಾಡಿನಲ್ಲಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್ ಸೆಂಥಿಲ್‌ ಯಶಸ್ಸು ಕಂಡರೆ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ.

ಸೆಂಥಿಲ್‌ 2009ನೇ ಬ್ಯಾಚ್‌ ಅಧಿಕಾರಿ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಜಿಲ್ಲಾಧಿಕಾರಿ ಹುದ್ದೆಯಲ್ಲಿ ಇದ್ದಾಗಲೇ 2019ರಲ್ಲಿ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್‌ ಚಿಂತಕರ ಚಾವಡಿಯಲ್ಲಿ ಗುರುತಿಸಿಕೊಂಡಿದ್ದರು. ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಲ್ಲಿ ಪಕ್ಷಕ್ಕೆ ನೆರವಾಗಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ‘ವಾರ್‌ ರೂಂ’ ನೇತೃತ್ವ ವಹಿಸಿದ್ದರು. ಲೋಕಸಭೆ ಚುನಾವಣೆ ವೇಳೆ, ರಾಹುಲ್ ಗಾಂಧಿ ಅವರ ಕರೆ ಮೇರೆಗೆ ಎಐಸಿಸಿ ‘ವಾರ್‌ ರೂಂ’ ಉಸ್ತುವಾರಿಯೂ ಆಗಿದ್ದರು. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತಿರುವಳ್ಳೂರ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ಪೂನ್‌ಬಾಲ ಗಣಪತಿ ವಿರುದ್ಧ 5.72 ಲಕ್ಷ ಮತಗಳ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ADVERTISEMENT

ಕರ್ನಾಟಕ ಕೇಡರ್‌ನ 2011ರ ಬ್ಯಾಚ್‌ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಉಡುಪಿ, ಚಿಕ್ಕಮಗಳೂರು ಎಸ್‌ಪಿಯಾಗಿ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದಾಗ 2019ರಲ್ಲಿ ರಾಜೀನಾಮೆ ನೀಡಿದ್ದರು. 2020ರಲ್ಲಿ ಬಿಜೆಪಿ ಸೇರಿದ್ದ ಅವರು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿ, ಅಲ್ಲಿನ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರ್‌ನಿಂದ ಸ್ಪರ್ಧಿಸಿದ್ದ ಅವರು ಡಿಎಂಕೆಯ ಗಣಪತಿ ರಾಜ್‌ಕುಮಾರ್ ಎದುರು 17,366 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಇಬ್ಬರೂ ರಾಜ್ಯದಲ್ಲಿ ತಮ್ಮ ಹುದ್ದೆಗಳಲ್ಲಿ ಉತ್ತಮ ಹೆಸರು ಮಾಡಿದ್ದ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದ ಅಧಿಕಾರಿಗಳು. ಇಬ್ಬರ ರಾಜಕೀಯ ಪಯಣದಲ್ಲಿ ಒಬ್ಬರಿಗೆ ಮೊದಲ ಪ್ರಯತ್ನದಲ್ಲೇ ಅದೃಷ್ಟ ಒಲಿದಿದೆ.

ರಾಜೀವ್‌ ಚಂದ್ರಶೇಖರ್‌ಗೂ ಸೋಲು:

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಗಳಲ್ಲಿ ಮೂರು ಬಾರಿ ಆಯ್ಕೆಯಾಗಿದ್ದ, ಕೇಂದ್ರ ಸಚಿವರೂ ಆದ ರಾಜೀವ್‌ ಚಂದ್ರಶೇಖರ್ ಈ ಬಾರಿ ಕೇರಳದ ತಿರುವನಂತಪುರದಿಂದ ಲೋಕಸಭೆಗೆ  ಸ್ಪರ್ಧಿಸಿದ್ದರು. ಉದ್ಯಮ ಮತ್ತು ಮಾಧ್ಯಮ ಸಮೂಹವೊಂದರ ಒಡೆತನ ಹೊಂದಿರುವ ಅವರು ಕಾಂಗ್ರೆಸ್‌ ನಾಯಕ ಶಶಿ ತರೂರ್ ವಿರುದ್ಧ 16,077 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.