ADVERTISEMENT

LS Polls: ಪ್ರಧಾನಿ ನರೇಂದ್ರ ಮೋದಿ ಆಸ್ತಿ ₹3 ಕೋಟಿ; ಪತ್ನಿ ಆಸ್ತಿ ಗೊತ್ತಿಲ್ಲ

ಪಿಟಿಐ
Published 14 ಮೇ 2024, 16:26 IST
Last Updated 14 ಮೇ 2024, 16:26 IST
<div class="paragraphs"><p>ಉತ್ತರ ಪ್ರದೇಶದ ವಾರಾಣಸಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು</p></div>

ಉತ್ತರ ಪ್ರದೇಶದ ವಾರಾಣಸಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು

   

ಪಿಟಿಐ ಚಿತ್ರ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ಮೌಲ್ಯ ₹3 ಕೋಟಿ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ. ಇವುಗಳಲ್ಲಿ ಬಹುತೇಕವು ನಿಶ್ಚಿತ ಠೇವಣಿ ರೂಪದಲ್ಲಿದೆ.

ADVERTISEMENT

ನರೇಂದ್ರ ಮೋದಿ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರವನ್ನು ಚುನಾವಣಾ ಆಯೋಗವು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ. 

ಇವರ ಚರಾಸ್ತಿಯ ಮೌಲ್ಯ ₹3,02,06,889 ಎಂದಿದೆ. ಇದರಲ್ಲಿ ₹2.85 ಕೋಟಿಯಷ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿದೆ.

ಇದರೊಂದಿಗೆ ₹2.67 ಲಕ್ಷ ಮೌಲ್ಯದ 45 ಗ್ರಾಂನ ನಾಲ್ಕು ಚಿನ್ನದ ಉಂಗುರ, ಕೈಯಲ್ಲಿ ₹52,920 ನಗದು ಹೊಂದಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ₹9.12 ಲಕ್ಷ ಹೂಡಿದ್ದಾರೆ. ಹಿಂದಿನ ಆರ್ಥಿಕ ವರ್ಷದಲ್ಲಿ ₹3.33 ಲಕ್ಷ ಆದಾಯ ತೆರಿಗೆ ಕಟ್ಟಲಾಗಿದೆ ಎಂದು ನಮೂದಿಸಲಾಗಿದೆ.

‘ತನ್ನ ಬಳಿ ಮನೆ ಅಥವಾ ಜಮೀನು ಒಳಗೊಂಡಂತೆ ಯಾವುದೇ ಚರಾಸ್ತಿ ಇಲ್ಲ. ಜಶೋದಾಬೆನ್‌ ತನ್ನ ಪತ್ನಿ. ಆದರೆ ಅವರ ಹೆಸರಿನಲ್ಲಿರುವ ಆಸ್ತಿಯ ವಿವರ ಗೊತ್ತಿಲ್ಲ’ ಎಂದು ಮೋದಿ ಹೇಳಿದ್ದಾರೆ. 

ತನ್ನ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ಬಾಕಿ ಇಲ್ಲ. ಯಾವುದರಲ್ಲೂ ಶಿಕ್ಷೆಯಾಗಿಲ್ಲ. ಸರ್ಕಾರಕ್ಕೆ ಪಾವತಿಸಬೇಕಿರುವ ಬಾಕಿ ಇಲ್ಲ ಎಂದು ದಾಖಲೆಯಲ್ಲಿ ಹೇಳಿದ್ದಾರೆ.

ತಾನು ಅಹಮದಾಬಾದ್ ನಿವಾಸಿಯಾಗಿದ್ದು, ಸಾಮಾಜಿಕ ಕಾರ್ಯ ಮತ್ತು ರಾಜಕೀಯ ಚಟುವಟಿಕೆಯೇ ತನ್ನ ವೃತ್ತಿ ಎಂದು ತಿಳಿಸಿದ್ದಾರೆ.

1967ರಲ್ಲಿ ಎಸ್‌ಎಸ್‌ಸಿ ಪೂರ್ಣಗೊಳಿಸಲಾಗಿದೆ. 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವುದಾಗಿಯೂ ಮೋದಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ₹2.5 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದರು. ಆಗ ತಾನು ಗುಜರಾತ್‌ನ ಗಾಂಧಿನಗರ ನಿವಾಸಿ ಎಂದಿದ್ದರು. ಆಗ ₹1.27 ಕೋಟಿ ಮೌಲ್ಯದ ನಿಶ್ಚಿತ ಠೇವಣಿ ಹಾಗೂ ₹38,750 ನಗದು ಹೊಂದಿರುವುದಾಗಿ ತಿಳಿಸಿದ್ದರು.

2014ರ ಚುನಾವಣೆ ಸಂದರ್ಭದಲ್ಲಿ ಅವರ ಆಸ್ತಿ ಮೌಲ್ಯ ₹1.65 ಕೋಟಿ ಇತ್ತು. 

ಪ್ರಧಾನಿ ಅವರು ತಮ್ಮ ಹೆಸರಿನಲ್ಲಿ ಅಂತರ್ಜಾಲತಾಣ, ಫೇಸ್‌ಬುಕ್, ಎಕ್ಸ್‌ನಲ್ಲಿ ಮೈಕ್ರೊಬ್ಲಾಗಿಂಗ್ ಖಾತೆ, ಯುಟ್ಯೂಬ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಅಪ್ ಖಾತೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.