ADVERTISEMENT

ನೀತಿ ಸಂಹಿತ ಉಲ್ಲಂಘನೆ ಆರೋಪ: ಕ್ರಮ ತೆಗೆದುಕೊಳ್ಳಲು ಆಯೋಗ ನಿರಾಕರಣೆ

ನಡ್ಡಾ, ಖರ್ಗೆಗೆ ಪತ್ರ ಬರೆದ ಆಯೋಗ

​ಪ್ರಜಾವಾಣಿ ವಾರ್ತೆ
Published 22 ಮೇ 2024, 16:28 IST
Last Updated 22 ಮೇ 2024, 16:28 IST
.
.   

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರಗಳನ್ನು ಬರೆದಿರುವ ಚುನಾವಣಾ ಆಯೋಗವು, ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಗಳನ್ನು ಗುರುತಿಸಿ ಕೆಲ ಪ್ರಶ್ನೆಗಳನ್ನು ಎತ್ತಿದೆ. ಆದರೆ ಈ ಸಂಬಂಧ ನೇರ ಕ್ರಮ ತೆಗೆದುಕೊಳ್ಳಲು ಆಯೋಗ ನಿರಾಕರಿಸಿದೆ.

‘ನಿಮ್ಮ ಪಕ್ಷದ ತಾರಾ ಪ್ರಚಾರಕರು ಕೋಮು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ತಪ್ಪಿತಸ್ಥರೆಂದು ತೋರುತ್ತದೆ’ ಎಂದು ನಡ್ಡಾ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಆಯೋಗವು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಅಥವಾ ಕ್ರಮದ ಕುರಿತೂ ಪ್ರಸ್ತಾಪಿಸಿಲ್ಲ.

ಏಪ್ರಿಲ್‌ 25ರ ಬಳಿಕ ಬಿಜೆಪಿ ವಿರುದ್ಧ 12 ಮತ್ತು ಕಾಂಗ್ರೆಸ್‌ ವಿರುದ್ಧ ನಾಲ್ಕು ದೂರುಗಳು ದಾಖಲಾಗಿವೆ ಎಂದು ಆಯೋಗ ಹೇಳಿದೆ. ಅಲ್ಲದೆ ನಡ್ಡಾ ಮತ್ತು ಖರ್ಗೆ ಅವರು ತಮ್ಮ ತಾರಾ ಪ್ರಚಾರಕರನ್ನು ಸಮರ್ಥಿಸಿಕೊಂಡಿರುವುದೂ ಸರಿಯಲ್ಲ ಎಂದು ಅದು ಹೇಳಿದೆ.

ADVERTISEMENT

2019ರಲ್ಲಿ ಚುನಾವಣಾ ಆಯುಕ್ತರೊಬ್ಬರ ಭಿನ್ನಾಭಿಪ್ರಯದ ನಡುವೆಯೂ ಮೋದಿಗೆ  ಕ್ಲೀನ್‌ ಚೀಟ್‌ ಅನ್ನು ಆಯೋಗ ನೀಡಿತ್ತು. ಆದರೆ ಈ ಬಾರಿ ಆಯೋಗವು ನೀತಿ ಸಂಹಿತೆ ಉಲ್ಲಂಘಿಸಿದವರನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವ ಬದಲಿಗೆ ಚೆಂಡನ್ನು ಬಿಜೆಪಿ ಅಧ್ಯಕ್ಷರ ಅಂಗಳದಲ್ಲಿರಿಸಿದೆ. ಈ ಮೂಲಕ ಅದು ಸುತ್ತಿಬಳಸಿ ನಡೆಯುವ ಮಾರ್ಗವನ್ನು ಕಂಡುಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಮೋದಿ ಮತ್ತು ಬಿಜೆಪಿ ಇತರ ನಾಯಕರ ಬೆಂಕಿ ಹಚ್ಚುವ ಕೋಮವಾದಿ ಭಾಷಣಗಳ ವಿರುದ್ಧ ನಾವು ದೂರು ಸಲ್ಲಿಸಿದ್ದೆವು. ಅದರಲ್ಲಿ ಎತ್ತಿದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಆಯೋಗವು ನೀಡಿರುವ ನಿರ್ದೇಶನ ಪತ್ರದಲ್ಲಿ ತಿಳಿಸಿಲ್ಲ. ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸದೇ, ನಾಜೂಕಾಗಿ ವರ್ತಿಸುತ್ತಿದೆ. ಈ ರೀತಿ ಮಾಡುವ ಮೂಲಕ ಅದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಅದನ್ನು ಪುನಃ ಸ್ಥಾಪಿಸಲು ಸಾಧ್ಯವಾಗದು ಎಂದು ಹೇಳಿದ್ದಾರೆ.

2019ರಲ್ಲಿ ಅಂದಿನ ಕಾಂಗ್ರೆಸ್‌ ನಾಯಕಿ ಸುಶ್ಮಿತಾ ದೇವ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕವೇ, ಆಯೋಗವು ಮೋದಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಆಯೋಗದ ಕ್ಲೀನ್‌ ಚಿಟ್‌ ಅನ್ನು ಯಾರು ಬೇಕಾದರೂ ಪ್ರಶ್ನಿಸಬಹುದು ಎಂದು ನ್ಯಾಯಾಲಯ ಆಗ ಹೇಳಿತ್ತು. 2019ರಲ್ಲಿ ಮೋದಿ ಕ್ಲೀನ್‌ ಚಿಟ್‌ ಅನ್ನು ವಿರೋಧಿಸಿದ್ದ ಚುನಾವಣಾ ಆಯುಕ್ತ ಅಶೋಕ್‌ ಲಾವಾಸಾ ಅವರು ಅಂತಿಮವಾಗಿ ಚುನಾವಣಾ ಆಯೋಗಕ್ಕೆ ರಾಜೀನಾಮೆ ನೀಡಿದ್ದರು. 

ಈ ಬಾರಿ ಆಯೋಗವು ಆರಂಭದಲ್ಲಿಯೇ ಸುತ್ತಿಬಳಸಿ ಸಾಗುವ ಪ್ರಕ್ರಿಯೆ ಕೈಗೊಂಡಿತ್ತು. ತಾರಾ ಪ್ರಚಾರಕರು ಮಾಡುವ ಟೀಕೆಗಳಿಗೆ ಆ ಪಕ್ಷದ ಮುಖ್ಯಸ್ಥರಿಗೆ ಆಯೋಗ ನೋಟಿಸ್‌ಗಳನ್ನು ಕಳುಹಿಸಿತ್ತು. ತಾರಾ ಪ್ರಚಾರಕರನ್ನು ಆಯ್ಕೆ ಮಾಡುವುದು ಪಕ್ಷಗಳಾದ್ದರಿಂದ ಅವುಗಳಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ ಎಂದು ಹೇಳಿ, ಪಕ್ಷಗಳ ಮುಖ್ಯಸ್ಥರಿಗೆ ನೋಟಿಸ್‌ ಕಳುಹಿಸಿತು. 

ಈ ಮೂಲಕ ಆಯೋಗವು ಪ್ರಧಾನಿ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳುವುದರಿಂದ ತಪ್ಪಿಸಿಕೊಂಡಿದೆ. ಈ ಕುರಿತು ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಆಯೋಗವು ಇದೇ ಮಾದರಿಯಲ್ಲಿ ಕಾಂಗ್ರೆಸ್‌ಗೂ ನೋಟಿಸ್‌ ಜಾರಿಗೊಳಿಸಿತು. ಅದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಷಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್‌ ನೀಡಿತ್ತು. 

ಬಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಮತ್ತು ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಅವರನ್ನು ಎರಡು ದಿನಗಳ ಕಾಲ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧಿಸಿತ್ತು. ಅದಾದ ತಿಂಗಳೊಳಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖ್ಯಸ್ಥರಿಗೆ ನೋಟಿಸ್‌ ನೀಡಿತ್ತು. ಸುರ್ಜೇವಾಲಾ ಪ್ರಕರಣದಲ್ಲಿ ಚುನಾವಣಾ ಆಯೋಗವು ಖರ್ಗೆ ಅವರಿಗೂ ನೋಟಿಸ್‌ ನೀಡಿತ್ತು. 

‘ಕಾಂಗ್ರೆಸ್ಸಿಗರು ಮಹಿಳೆಯರ ಮಂಗಲ ಸೂತ್ರ ಕಿತ್ತುಕೊಳ್ಳುತ್ತಾರೆ ಮತ್ತು ನುಸುಳುಕೋರರಿಗೆ ಸಂಪತನ್ನು ಮರು ಹಂಚಿಕೆ ಮಾಡುತ್ತಾರೆ’ ಎಂದು ಪ್ರಧಾನಿ ಮೋದಿ ಅವರು ಭಾಷಣ ಮಾಡಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಆಯೋಗ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು. ಅದರ ಬೆನ್ನಲ್ಲೇ ಆಯೋಗ ಏಕಕಾಲದಲ್ಲಿ ಖರ್ಗೆ ಅವರಿಗೂ ನೋಟಿಸ್‌ ಜಾರಿಗೊಳಿಸಿತ್ತು.

ಆದರೆ ಈ ನೋಟಿಸ್‌ಗಳಲ್ಲಿ ಮೋದಿ, ಖರ್ಗೆ ಅಥವಾ ರಾಹುಲ್‌ ಗಾಂಧಿ ಅವರ ಹೆಸರುಗಳನ್ನು ಆಯೋಗ ಉಲ್ಲೇಖಿಸಿರಲಿಲ್ಲ. ಅಲ್ಲದೆ ಇತ್ತೀಚಿನ ಪತ್ರಗಳಲ್ಲಿಯೂ ಈ ಮೂವರು ನಾಯಕರಲ್ಲಿ ಯಾರೊಬ್ಬರ ಹೆಸರನ್ನೂ ಆಯೋಗ ಪ್ರಸ್ತಾಪಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.