ಶಿವಮೊಗ್ಗ: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು, ಅವರ ಪರ ಮತಯಾಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಪ್ರಜ್ವಲ್ ಪರ ಪ್ರಧಾನಿ ಮತಯಾಚನೆ ನಡೆಸಿದ್ದು, ದೇಶದ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
'ಇದು ಕೇವಲ ಲೈಂಗಿಕ ಹಗರಣವಲ್ಲ ಬದಲಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ. ಹಾಸನದ ಎನ್‌ಡಿಎ ಅಭ್ಯರ್ಥಿ ಪಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೊ ಮಾಡಿದ್ದಾನೆ' ಎಂದು ಅವರು ಆರೋಪಿಸಿದರು.
'ಸಾಮೂಹಿಕ ಅತ್ಯಾಚಾರಿಯನ್ನು ಬೆಂಬಲಿಸಿ ಪ್ರಧಾನಿ ಮೋದಿ ಪ್ರಚಾರ ಮಾಡಿದರು. ಈ ಅತ್ಯಾಚಾರಿಗೆ ಮತ ನೀಡಿದರೆ ಅದು ನನಗೂ ನೆರವಾಗುತ್ತದೆ ಎಂದು ರಾಜ್ಯದ ಜನತೆಯ ಮುಂದೆ ಹೇಳಿದರು. ಪ್ರಧಾನಿ ದೇಶದ ತಾಯಂದಿರು, ಸಹೋದರಿಯರಲ್ಲಿ ಕ್ಷಮೆಯಾಚಿಸಬೇಕು' ಎಂದು ರಾಹುಲ್ ಹೇಳಿದ್ದಾರೆ.
ಪ್ರಕರಣ ಗೂತ್ತಿದ್ದರೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಪ್ರಜ್ವಲ್ ಅವರನ್ನು ಬೆಂಬಲಿಸಿತು ಎಂದು ರಾಹುಲ್ ಆರೋಪಿಸಿದರು. ದೇಶದ ಪ್ರತಿಯೊಬ್ಬ ಮಹಿಳೆಯನ್ನು ಪ್ರಧಾನಿ ಅವಮಾನಿಸಿದ್ದಾರೆ. ಅತ್ಯಾಚಾರಿಯೊಬ್ಬನಿಗೆ ಪ್ರಧಾನಿ ಮತಯಾಚಿಸಿದ್ದು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಇದುವೇ ಬಿಜೆಪಿಯ ಸಿದ್ಧಾಂತ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.