ADVERTISEMENT

ಲೋಕಸಭೆ ಹೋರಾಟಕ್ಕೆ ಸಮಾನ ವೇದಿಕೆ ಕಲ್ಪಿಸಿ: ಚುನಾವಣಾ ಆಯೋಗಕ್ಕೆ ಪ್ರಿಯಾಂಕಾ ಆಗ್ರಹ

ಪಿಟಿಐ
Published 31 ಮಾರ್ಚ್ 2024, 11:44 IST
Last Updated 31 ಮಾರ್ಚ್ 2024, 11:44 IST
   

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಹೋರಾಟದ ವೇದಿಕೆ ಕಲ್ಪಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ 'ಲೋಕತಂತ್ರ ಬಚಾವೋ' (ಪ್ರಜಾಪ್ರಭುತ್ವ ಉಳಿಸಿ) ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು, ಚುನಾವಣಾ ಆಯೋಗವನ್ನುದ್ದೇಶಿಸಿ ತಮ್ಮ ಮೈತ್ರಿಕೂಟದ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದಾರೆ.

ಚುನಾವಣೆ ಮೇಲೆ ಪರಿಣಾಮ ಬೀರುವುದಕ್ಕಾಗಿ ವಿರೋಧ ಪಕ್ಷಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಆದಾಯ ತೆರಿಗೆ (ಐ.ಟಿ) ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಚುನಾವಣೆ ವೇಳೆ ವಿರೋಧ ಪಕ್ಷಗಳ ಹಣಕಾಸು ವ್ಯವಹಾರದ ಮೇಲೆ ಬಲವಂತದ ಕ್ರಮ ಕೈಗೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದಿರುವ ಅವರು, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ವಸೂಲಿ ಮಾಡಿರುವ ದೇಣಿಗೆ ಕುರಿತಂತೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿಯು ಪ್ರಜಾಸತ್ತಾತ್ಮಕವಲ್ಲದ ಅಡಚಣೆಗಳನ್ನು ಉಂಟುಮಾಡುತ್ತಿದ್ದರೂ, 'ಇಂಡಿಯಾ' ಮೈತ್ರಿಕೂಟವು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಟ ಮುಂದುವರಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಬಾಲ್ಯದಲ್ಲಿದ್ದಾಗ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೆ. ರಾವಣನ ದಹನದಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಪ್ರಿಯಾಂಕಾ ಸ್ಮರಿಸಿದ್ದಾರೆ.

'ನಾನು ಮಗುವಾಗಿದ್ದಾಗ, ಅಜ್ಜಿ ಇಂದಿರಾ (ಇಂದಿರಾ ಗಾಂಧಿ) ಅವರೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಅವರು, ನಮಗೆ ರಾಮಾಯಣದ ಕಥೆ ಹೇಳುತ್ತಿದ್ದರು' ಎಂದು ನೆನಪಿಸಿಕೊಂಡಿದ್ದಾರೆ.

ಮುಂದುವರಿದು, 'ಇಂದು ಅಧಿಕಾರದಲ್ಲಿರುವವರು ತಮ್ಮನ್ನು ತಾವು ರಾಮ ಭಕ್ತರು ಎಂದು ಕರೆದುಕೊಳ್ಳುತ್ತಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಶ್ರೀರಾಮ ಸತ್ಯಕ್ಕಾಗಿ ಹೋರಾಟ ನಡೆಸಿದಾಗ, ಅವರ ಬಳಿ ಅಧಿಕಾರ, ಸಂಪತ್ತು ಇರಲಿಲ್ಲ. ರಾವಣನ ಬಳಿ ಎಲ್ಲವೂ ಇದ್ದವು. ಆದರೆ, ಸತ್ಯ, ಪ್ರೀತಿ, ಕರುಣೆ, ಭರವಸೆ, ತಾಳ್ಮೆ, ಧೈರ್ಯ ಹಾಗೂ ವಿನಯ ಶ್ರೀರಾಮನೊಂದಿಗೆ ಇದ್ದವು. ಅಧಿಕಾರ ಶಾಶ್ವತವಲ್ಲ. ಅಹಂಕಾರ ಅಳಿಯಲಿದೆ ಎಂಬುದು ಶ್ರೀರಾಮನ ಬದುಕಿನ ಸಂದೇಶ ಎಂದು ಅಧಿಕಾರದಲ್ಲಿರುವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಬಯಸುತ್ತೇನೆ' ಎಂದು ಎಚ್ಚರಿಕೆ ಧಾಟಿಯಲ್ಲಿ ಹೇಳಿದ್ದಾರೆ.

ದೆಹಲಿಯ ಎಎಪಿ ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ, ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದಾರೆ. ಇದನ್ನು ಖಂಡಿಸಿ, ವಿರೋಧ ಪಕ್ಷಗಳ ಮೈತ್ರಿಕೂಟ ರ್‍ಯಾಲಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.