ಮುಂಬೈ: ‘ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಗೈರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈಗ ತಮ್ಮ ಮತ ಬ್ಯಾಂಕ್ ಆದ‘ಬೆಂಡಿ ಬಜಾರ್’ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದಕ್ಷಿಣ ಮುಂಬೈನಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ‘ಬೆಂಡಿ ಬಜಾರ್’ ಅನ್ನು ಶಾ ಉದಾಹರಣೆಯಾಗಿ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು. ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಏಕರೂಪ ನಾಗರಿಕ ಸಂಹಿತೆಗೆ ಕಾಂಗ್ರೆಸ್ ವಿರೋಧಿಸುತ್ತಿದ್ದರೂ, ಬಿಜೆಪಿ ನೇತೃತ್ವದ ಸರ್ಕಾರ ಅದನ್ನು ಜಾರಿಗೆ ತರಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆಯಲು ಕಾಂಗ್ರೆಸ್ ಸಿದ್ಧವಿರಲಿಲ್ಲ. ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿ ರಾಹುಲ್ ಗಾಂಧಿ ಅವರು ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಬರಲಿಲ್ಲ. ಆದರೆ ನಮ್ಮ ಸರ್ಕಾರ ಷರಿಯ ಕಾನೂನಿನನ್ವಯ ನಡೆಯುವುದಿಲ್ಲ’ ಎಂದು ಶಾ ವಾಗ್ದಾಳಿ ನಡೆಸಿದರು.
‘ಸೋನಿಯಾ–ಮನಮೋಹನ್ ಸಿಂಗ್ ಸರ್ಕಾರವು ₹12 ಲಕ್ಷ ಕೋಟಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದೆ. ಆದರೆ ಅಂಥ ಯಾವುದೇ ಆಪಾದನೆ ನರೇಂದ್ರ ಮೋದಿ ಅವರ ಮೇಲಿಲ್ಲ. ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್ ಬಗ್ಗೆ ಮೃದು ಧೋರಣೆ ಹೊಂದಿದ್ದ ಜನರೊಂದಿಗೆ ಉದ್ಧವ್ ಠಾಕ್ರೆ ಹೇಗೆ ಆರಾಮವಾಗಿ ಕೂರಲು ಸಾಧ್ಯ’ ಎಂದು ಪ್ರಶ್ನಿಸಿದರು.
ಧುಲೆ ಹಾಗೂ ದಕ್ಷಿಣ ಮುಂಬೈ ಕ್ಷೇತ್ರಗಳಿಗೆ ಮೇ 20ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.