ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರೋಡ್‌ಶೋ ಮತ್ತು ರ‍್ಯಾಲಿಗಳನ್ನು ಒಳಗೊಂಡು ಕ್ರಮವಾಗಿ 107 ಹಾಗೂ 108 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಬಹಿರಂಗ ಪ್ರಚಾರ ತೆರೆಬಿದ್ದ ಗುರುವಾರ, ರಾಹುಲ್ ಗಾಂಧಿ ಅವರು ಪಂಜಾಬ್‌ನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರೆ, ಪ್ರಿಯಾಂಕಾ ಅವರು ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ರೋಡ್ ಶೋ ನಡೆಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿದ ರೋಡ್ ಶೋ, ಸಂವಾದ ಹಾಗೂ ಪ್ರಮುಖ ಪ್ರಚಾರ ಕಾರ್ಯಗಳಲ್ಲಿ 107ರಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 108ರಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ 100ಕ್ಕೂ ಹೆಚ್ಚು ಮಾಧ್ಯಮ ಹೇಳಿಕೆ, ಟಿ.ವಿ. ಸಂದರ್ಶನ ಹಾಗೂ ಐದು ಮುದ್ರಣ ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಿಯಾಂಕಾ ಗಾಂಧಿ ಅವರು ರಾಯ್‌ಬರೇಲಿ ಹಾಗೂ ಪಕ್ಕದ ಅಮೇಠಿಯಲ್ಲಿ ಎರಡು ವಾರಗಳ ಕಾಲ ಪ್ರಚಾರ ಕೈಗೊಂಡಿದ್ದರು. ರಾಹುಲ್ ಗಾಂಧಿ ಅವರು ವಯನಾಡ್ ಜತೆಗೆ ರಾಯ್‌ಬರೇಲಿಯಿಂದಲೂ ಈ ಬಾರಿ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ ಗಾಂಧಿ ಕುಟುಂಬಕ್ಕೆ ನಿಕಟವಾಗಿರುವ ಕೆ.ಎಲ್.ಶರ್ಮಾ ಅವರು ಅಮೇಠಿಯಿಂದ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಈ ಬಾರಿ ಪ್ರಚಾರಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹರಿತವಾದ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು 16 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಸಾವಿರಾರು ಜನ ಸೇರಿದ್ದ ಎರಡು ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಅವರೊಂದಿಗೆ ಉತ್ತರ ಪ್ರದೇಶದಲ್ಲಿ ಹಾಗೂ ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಅವರೊಂದಿಗೆ ಬಿಹಾರದಲ್ಲಿ ‘ಇಂಡಿಯಾ’ ಬಣದ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡರು.
ಇವರ ಈ ಭರ್ಜರಿ ಪ್ರಚಾರದ ಫಸಲು ಹೇಗಿರಲಿದೆ ಎಂಬುದು ಜೂನ್ 4ರಂದು ನಡೆಯುವ ಮತ ಎಣಿಕೆಯ ಮೂಲಕ ತಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.