ಹೈದರಾಬಾದ್: ‘ಪೊಲೀಸರನ್ನು 15 ಸೆಕೆಂಡುಗಳ ಕಾಲ ಹಿಂಪಡೆಯಿರಿ. ಅವರು ಎಲ್ಲಿಂದ ಬಂದಿದ್ದಾರೆ ಹಾಗೂ ಎಲ್ಲಿ ಹೋದರು ಎಂಬುದೇ ತಿಳಿಯದಂತೆ ಮಾಡುತ್ತೇವೆ’ ಎಂದು ಬಿಜೆಪಿ ನಾಯಕಿ ನವನೀತ್ ರಾಣಾ ವಾಗ್ದಾಳಿ ನಡೆಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸೋದರ ಅಖ್ಬರುದ್ದೀನ್ ಓವೈಸಿ ಅವರು 2013ರಲ್ಲಿ ಮಾಡಿದ ಭಾಷಣದಲ್ಲಿ, ‘ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆಯ ಅನುಪಾತ ಸರಿದೂಗಿಸಲು 15 ನಿಮಿಷ ಸಾಕು’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ರಾಣಾ, 15 ಸೆಕೆಂಡುಗಳ ಕಾಲಾವಕಾಶ ಸಾಕು ಎಂದಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನವನೀತ್ ಅವರು ಮಾತನಾಡಿ, ‘ನೀವು 15 ನಿಮಿಷ ಪೊಲೀಸರನ್ನು ಹಿಂದಕ್ಕೆ ಸರಿಸಲು ಕೇಳುತ್ತಿದ್ದೀರಿ. ಆದರೆ ನಾವು ಅದೇ ಕೆಲಸಕ್ಕೆ 15 ಸೆಕೆಂಡ್ ಸಾಕು ಎನ್ನುತ್ತಿದ್ದೇವೆ’ ಎಂದು ಹೇಳಿದ ಅವರು ವಿಡಿಯೊ ಕ್ಲಿಪ್ ಒಂದನ್ನು ತೋರಿಸಿದರು.
ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಹಾಗೂ ತೆಲಂಗಾಣದ ಪಕ್ಷದ ಇತರ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಕೈಗೊಂಡು ಮಾತನಾಡಿದರು.
ನವನೀತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ, ‘ಒಂದು ಗಂಟೆಯಾದರೂ ಸಮಯ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳುತ್ತೇನೆ. ಇವರ ಬಳಿ ಎಷ್ಟರ ಮಟ್ಟಿಗೆ ಮಾನವೀಯತೆ ಇದೆ ಎಂಬುದನ್ನು ಪರೀಕ್ಷಿಸಿಯೇ ಬಿಡೋಣ. ಇವರನ್ನು ತಡೆಯುತ್ತಿರುವವರು ಯಾರು? ನಿಮ್ಮದೇ ಪ್ರಧಾನಿ ದೆಹಲಿಯಲ್ಲಿದ್ದಾರೆ. ಆರ್‌ಎಸ್‌ಎಸ್ ಕೂಡಾ ನಿಮ್ಮದೇ. ಎಲ್ಲವೂ ನಿಮ್ಮದೇ ಆಗಿರುವಾಗ, ಎಲ್ಲಿಗೆ ಬರಬೇಕು ಹೇಳಿ. ನಾವು ಅಲ್ಲಿಗೆ ಬರಲು ಸಿದ್ಧ’ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.