ನವದೆಹಲಿ: ಕೇರಳದ ವಯನಾಡ್ ಜತೆಗೆ ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ವ್ಯಂಗ್ಯವಾಡಿದ್ದು, ’ಓಡು ರಾಹುಲ್ ಓಡು, ರಾಹುಲ್ ಓಡು, ರಾಹುಲ್ ಓಡು’ ಎಂದು ಕಾಲೆಳೆದಿದೆ.
ಸುದ್ದಿಗಾರರೊಂದಿಗೆ ಈ ಮಾಹಿತಿ ಹಂಚಿಕೊಂಡಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್, ‘ರಾಹುಲ್ ಈ ಬಾರಿ ದಕ್ಷಿಣದಲ್ಲೂ ಸೋಲು ಅನುಭವಿಸಲಿದ್ದಾರೆ. ಹೀಗಾಗಿ ಅವರಿಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುವುದೇ ಕಾಯಂ ಆಗಲಿದೆ’ ಎಂದಿದ್ದಾರೆ.
‘ಭಯದಿಂದ ಓಡಬೇಡಿ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪುನುರಚ್ಚರಿಸಿರುವ ಗೌತಮ್, ‘ರಾಹುಲ್ ಗಾಂಧಿ ಇನ್ನೂ ಮಗು. ಅವರನ್ನು ನಾವೆಲ್ಲರೂ ಉತ್ತೇಜಿಸಬೇಕಿದೆ. ಆದರೆ ಜನರೇ ಅವರನ್ನು ತಿರಸ್ಕರಿಸುತ್ತಿದ್ದಾರೆ’ ಎಂದಿದ್ದಾರೆ.
‘ವಯನಾಡ್ ಕ್ಷೇತ್ರದ ಜನರನ್ನು ವಂಚಿಸಿರುವ ರಾಹುಲ್ ಗಾಂಧಿ, ಈಗ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸೋಲಿನ ಭೀತಿಯಿಂದ ಅಮೇಠಿ ಬಿಟ್ಟು ವಯನಾಡ್‌ಗೆ ತೆರಳಿದ್ದ ರಾಹುಲ್, ಅಲ್ಲಿಯೂ ಪರಾಭವಗೊಳ್ಳುವ ಭೀತಿಯಿಂದ, ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ’ ಎಂದು ಗೌತಮ್ ಆರೋಪಿಸಿದ್ದಾರೆ.
ರಾಯ್‌ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಅವರ ತಾಯಿ ಸೋನಿಯಾ ಗಾಂಧಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.