ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು ರಾಜ್ಯ ಚುನಾವಣಾ ಆಯೋಗ ಫಲಿತಾಂಶವನ್ನು ಪ್ರಕಟಿಸಿದೆ.
ಈ ಸಲ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಕ್ಲಿನ್ ಸ್ವೀಪ್ ಮಾಡುವ ಮೂಲಕ ಎರಡನೇ ಅವಧಿಗೆ ಗದ್ದುಗೆ ಹಿಡಿದಿದೆ. ಎಸ್‌ಡಿಎಫ್ ಪಕ್ಷ ಕೇವಲ ಒಂದು ಸ್ಥಾನ ಪಡೆದಿದೆ. ಇನ್ನೂ ಬಿಜೆಪಿ ಮತ್ತು ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿವೆ.
ಸಿಕ್ಕಿಂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಂದು ಏಕಕಾಲದಲ್ಲಿ ನಡೆದಿತ್ತು. ಲೋಕಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ (ಜೂ 4) ನಡೆಯಲಿದೆ.
32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಸಿಕ್ಕಿಂ ರಾಜ್ಯದಲ್ಲಿ ಎಸ್‌ಕೆಎಂ–31 ಹಾಗೂ ಎಸ್‌ಡಿಪಿ–01 ಸ್ಥಾನ ಪಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಖಾತೆ ತೆರೆದಿಲ್ಲ. ಬಹುಮತಕ್ಕೆ 17 ಸ್ಥಾನಗಳು ಬೇಕಿದ್ದವು.
ಎಸ್‌ಕೆಎಂ ನಾಯಕ ಹಾಗೂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಅಡಿಯಿಟ್ಟಿದೆ. ತಮಾಂಗ್ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಇವರ ಪತ್ನಿ ಕೂಡ ಗೆಲುವು ದಾಖಲಿಸಿದ್ದಾರೆ.
2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.