ಅಮರಾವತಿ: ರಾಜಕೀಯ ಜಿದ್ದಾಜಿದ್ದಿ ಕಾರಣದಿಂದ ರಂಗೇರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಕಣ, ಈ ಬಾರಿ ಮತ್ತೊಂದು ಕಾರಣದಿಂದಾಗಿ ಗಮನ ಸೆಳೆಯುತ್ತಿದೆ.
ಆರು ಜನ ಮಾಜಿ ಮುಖ್ಯಮಂತ್ರಿಗಳ ಪುತ್ರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ಈ ಬಾರಿಯ ಚುನಾವಣೆಯ ವಿಶೇಷ.
ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರರಾಗಿರುವ ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಪುಲಿವೆಂದುಲ ಕ್ಷೇತ್ರವು ವೈಎಸ್‌ಆರ್ ಕುಟುಂಬದ ಭದ್ರಕೋಟೆ. 1978ರಿಂದ 2009ರ ನಡುವೆ 6 ಬಾರಿ ಈ ಕ್ಷೇತ್ರದಿಂದ ಈ ಕುಟುಂಬದವರೇ ಆಯ್ಕೆಯಾಗಿದ್ದರು. 2009ರ ಸೆಪ್ಟೆಂಬರ್ 2ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಾಜಶೇಖರ ರೆಡ್ಡಿ ಮೃತಪಟ್ಟರು. ಆಗ, ಅವರು ಎರಡನೇ ಬಾರಿ ಆಯ್ಕೆಯಾಗಿ, ಆಗಷ್ಟೇ ಅಧಿಕಾರ ಸ್ವೀಕರಿಸಿದ್ದರು.
ಟಿಡಿಪಿ ಮುಖ್ಯಸ್ಥ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಮಂಗಲಗಿರಿ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಬಾರಿ ಅವರ ಎದುರು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಎಂ.ಲಾವಣ್ಯ ಕಣಕ್ಕಿಳಿಯುತ್ತಿದ್ದಾರೆ.
ಲೋಕೇಶ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಮೇರು ನಟ ಎನ್.ಟಿ.ರಾಮ ರಾವ್ ಅವರ ಮೊಮ್ಮಗ.
ಹಿಂದೂಪುರ ಕ್ಷೇತ್ರದ ಶಾಸಕ ಹಾಗೂ ತೆಲುಗು ನಟ ಎನ್.ಬಾಲಕೃಷ್ಣ ಅವರು ಈ ಬಾರಿ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಹಿಂದೂಪುರ ಕ್ಷೇತ್ರ ಎನ್‌ಟಿಆರ್ ಕುಟುಂಬ ಭದ್ರಕೋಟೆ. ಮೊದಲು ರಾಮ ರಾವ್ ನಂತರ, ಅವರ ಹಿರಿಯ ಪುತ್ರ ಎನ್.ಹರಿಕೃಷ್ಣ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ತೆನಾಲಿ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಜನ ಸೇನಾ ಪಕ್ಷದ ಮುಖಂಡ ಎನ್.ಮನೋಹರ್ ಅವರು ಮಾಜಿ ಮುಖ್ಯಮಂತ್ರಿ ಎನ್.ಭಾಸ್ಕರ್ ರಾವ್ ಅವರ ಪುತ್ರ.
ಮಾಜಿ ಸಿ.ಎಂ ಎನ್.ಜನಾರ್ದನ ರೆಡ್ಡಿ ಅವರ ಪುತ್ರ ಎನ್.ರಾಮಕುಮಾರ್ ರೆಡ್ಡಿ ಅವರು ವೈಎಸ್‌ಆರ್ ಕಾಂಗ್ರೆಸ್ ಹುರಿಯಾಳಾಗಿ ವೆಂಕಟಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದರೆ, ಮತ್ತೊಮ್ಮ ಮಾಜಿ ಮುಖ್ಯಮಂತ್ರಿ ಕೆ.ವಿಜಯಭಾಸ್ಕರ್ ರೆಡ್ಡಿ ಪುತ್ರ ಕೆ.ಸೂರ್ಯಪ್ರಕಾಶ ರೆಡ್ಡಿ ಅವರು ಟಿಡಿಪಿ ಅಭ್ಯರ್ಥಿಯಾಗಿ ಧೋನೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.