ನವದೆಹಲಿ: ಬಹುಜನ ಸಮಾಜ ಪಕ್ಷದಿಂದ ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಇಂದು (ಬುಧವಾರ) ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.
ಮಾರ್ಚ್ 14ರಂದು ಡ್ಯಾನಿಶ್ ಅಲಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಡ್ಯಾನಿಶ್ ಅಲಿ ಅವರು ಉತ್ತರ ಪ್ರದೇಶದ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2023ರ ಡಿಸೆಂಬರ್ 9ರಂದು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇರೆಗೆ ಸಂಸದ ಡ್ಯಾನಿಶ್ ಅಲಿ ಅವರನ್ನು ಬಹುಜನ ಸಮಾಜ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು.
ಅಮಾನತಿಗೆ ಕಾರಣವೇನು?: ಸಂಸತ್ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಡಿಸಿದ ನಿರ್ಣಯ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರು. ಬಿಎಸ್‌ಪಿಯ ಉಳಿದ ಸದಸ್ಯರು ಸದನದಲ್ಲಿ ಆಸೀನರಾಗಿದ್ದರೂ ಅಲಿ ಮಾತ್ರ ವಿಪಕ್ಷ ಸದಸ್ಯರ ನಡೆಯನ್ನು ಅನುಕರಿಸಿದ್ದರು. ಇದು ಪಕ್ಷದ ವಿರೋಧಿ ನಿಲುವಾಗಿದೆ ಎಂದು ಹೇಳಲಾಗಿತ್ತು.
ಮಾಯಾವತಿ ನೇತೃತ್ವದ ಬಿಎಸ್‌ಪಿ ‘ಇಂಡಿಯಾ’ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿದೆ. ಆದರೆ ಅಲಿ ಅವರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುವ ವಿಪಕ್ಷ ಸದಸ್ಯರ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿತ್ತು.
‘ಪಕ್ಷದ ನೀತಿ, ಸೈದ್ಧಾಂತಿಕತೆ ಹಾಗೂ ಶಿಸ್ತು ಉಲ್ಲಂಘನೆ ಮಾಡದಂತೆ ಹಲವು ಬಾರಿ ನಿಮಗೆ ಮೌಖಿಕವಾಗಿ ಸೂಚಿಸಲಾಗಿದೆ. ಆದರೆ, ಅದನ್ನು ಉಲ್ಲಂಘಿಸಿದ್ದೀರಿ’ ಎಂದು ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು, ಅಲಿ ಅವರಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.
2018ರ ವರೆಗೆ ಅಲಿ ಅವರು ಜೆಡಿಎಸ್‌ನ ಸದಸ್ಯರಾಗಿದ್ದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮನವಿ ಮೇರೆಗೆ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ನಿಮಗೆ ಬಿಎಸ್‌ಪಿ ಟಿಕೆಟ್ ನೀಡಲಾಗಿತ್ತು. ಪಕ್ಷದ ನೀತಿ ನಿಯಮ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆಂದು ದೇವೇಗೌಡ ಕೂಡ ಭರವಸೆ ನೀಡಿದ್ದರು. ಆದರೆ, ಎಲ್ಲಾ ಭರವಸೆಯನ್ನು ಉಲ್ಲಂಘಿಸಿದ್ದೀರಿ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.