ಅಮರಾವತಿ: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಗೆಲುವು ಕೊಟ್ಟ ಮತದಾರರಿಗೆ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಧನ್ಯವಾದ ಹೇಳಿದ್ದಾರೆ.
ಮಂಗಳವಾರ ರಾತ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆಂಧ್ರ ಪ್ರದೇಶದ ಭವಿಷ್ಯದ ಬಗ್ಗೆ ಬದ್ಧತೆ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಂಗಳವಾರ ಹೊರಬಿದ್ದ ಫಲಿತಾಂಶದಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಒಕ್ಕೂಟವು ಆಂಧ್ರ ಪ್ರದೇಶದಲ್ಲಿ 21 ಲೋಕಸಭಾ ಕ್ಷೇತ್ರಗಳು ಮತ್ತು 164 ವಿಧಾನಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು.
25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16, ಬಜೆಪಿ 3 ಮತ್ತು ಜನಸೇನಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ವೈಎಸ್‌ಆರ್‌ಸಿಪಿ 4ರಲ್ಲಿ ಜಯ ಕಂಡಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ಟಿಡಿಪಿ 135, ಜನಸೇನಾ 21 ಮತ್ತು ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ವೈಎಸ್‌ಆರ್‌ಸಿಪಿ ಕೇವಲ 11 ಕ್ಷೇತ್ರಗಳಲ್ಲಿ ಗೆದ್ದಿದೆ.
‘ಇಂದು ನನ್ನ ಹೃದಯ ಕೃತಜ್ಞತೆಯಿಂದ ತುಂಬಿಹೋಗಿದೆ. ತಮ್ಮ ಸೇವೆ ಮಾಡಲು ಟಿಡಿಪಿ–ಜೆಎಸ್‌ಪಿ–ಬಿಜೆಪಿ ಮೈತ್ರಿಕೂಟಕ್ಕೆ ಅಶೀರ್ವಾದ ಮಾಡಿದ ರಾಜ್ಯದ ಜನತೆಗೆ ಧನ್ಯವಾದಗಳು. ಒಟ್ಟಾಗಿ ನಾವು ಈ ಗೆಲುವು ದಾಖಲಿಸಿದ್ದೇವೆ. ರಾಜ್ಯದ ಮರುನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇವೆ’ ಎಂದಿದ್ದಾರೆ.
ಎಲ್ಲ ಸಂಕಷ್ಟಗಳನ್ನು ಮೀರಿ ಪಕ್ಷದ ನಾಯಕರು, ಕಾರ್ಯಕರ್ತರ ಕಠಿಣ ಪರಿಶ್ರಮ ದ ಫಲವೇ ಈ ಜಯ ಎಂದು ಅವರು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.