ಹೈದರಾಬಾದ್: 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಬಾಲಾಕೋಟ್ ದಾಳಿ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿತ್ತು ಎಂದು ಆರೋಪಿಸಿದ ಅವರು, ಪುಲ್ವಾಮಾ ಘಟನೆ ಏಕೆ ಸಂಭವಿಸಿತು?, ಗುಪ್ತಚರ ಜಾಲ ಏನು ಮಾಡುತ್ತಿತ್ತು?, ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಲು ನೀವು (ಮೋದಿ) ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
‘ಮೋದಿ ಅವರು ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ. ಅವರ ಆಲೋಚನಾ ಕ್ರಮ ಸರಿಯಲ್ಲ. ದೇಶದಲ್ಲಿ ಮೋದಿ ಮತ್ತು ಬಿಜೆಪಿಯನ್ನು ತೊಡೆದುಹಾಕುವ ಸಮಯ ಬಂದಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಲಾಕೋಟ್‌ನಲ್ಲಿ ನಿಜವಾಗಿಯೂ ಸರ್ಜಿಕಲ್ ಸ್ಟ್ರೈಕ್ ನಡೆದಿದೆಯೇ ಎಂಬುದು ಯಾರಿಗೂ ತಿಳಿದಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
2019ರ ಫೆಬ್ರುವರಿ 14ರಂದು ಸಿಆರ್‌ಪಿಎಫ್ ಬೆಂಗಾವಲು ವಾಹನಕ್ಕೆ ಪಾಕಿಸ್ತಾನದ ಉಗ್ರರು ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದರು. ಈ ವೇಳೆ 40 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನ ಶಂಕಿತ ಉಗ್ರ ಶಿಬಿರದ ಮೇಲೆ ಭಾರತವು ವೈಮಾನಿಕ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.