ADVERTISEMENT

'ಮ್ಯಾನ್ ಆಫ್ ದಿ ಮ್ಯಾಚ್' ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಲಿ: ಶಶಿ ತರೂರ್

ಪಿಟಿಐ
Published 8 ಜೂನ್ 2024, 5:42 IST
Last Updated 8 ಜೂನ್ 2024, 5:42 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಸ್ಥಾನ ವಹಿಸಬೇಕು ಎಂಬುದರ ಕುರಿತು ಬೇಡಿಕೆ ಬಲವಾಗುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರು ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಹಾಗೂ ಸಂಸದೀಯ ಪಕ್ಷದ ಸಭೆಯಲ್ಲಿ (ಸಿಪಿಪಿ) ಈ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ 'ಇಂಡಿಯಾ' ಮೈತ್ರಿಕೂಟದ ಉತ್ತಮ ಫಲಿತಾಂಶದಲ್ಲಿ ರಾಹುಲ್ ಗಾಂಧಿ ದೊಡ್ಡ ಪಾತ್ರ ವಹಿಸಿದ್ದು, ಸಂಸತ್ತಿನಲ್ಲಿ ವಿರೋಧ ಪಕ್ಷದ ಪ್ರಬಲ ನಾಯಕರಾಗಿ ಮುಂದುವರಿಯಲು ನಾಯಕರು ಒತ್ತಾಯಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ರಾಹುಲ್ ಗಾಂಧಿ 'ಮ್ಯಾನ್ ‌ಆಫ್ ದಿ ಮ್ಯಾಚ್'...

ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ 'ಮ್ಯಾನ್ ಆಫ್ ದಿ ಮ್ಯಾಚ್' ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶಂಸಿಸಿದ್ದಾರೆ.

'ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ದೇಶದಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹುದ್ದೆ ವಹಿಸುವುದು ಸೂಕ್ತವೆನಿಸಲಿದೆ. ಈ ವಿಷಯದಲ್ಲಿ ಖಂಡಿತವಾಗಿಯೂ ನನ್ನ ಅಭಿಪ್ರಾಯ ತಿಳಿಸಿದ್ದೇನೆ' ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಬಳಿಕ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ ಆಡಳಿತ ಪಕ್ಷವನ್ನು ಎದುರಿಸಲು ಹೆಚ್ಚಿನ ಸಂಖ್ಯಾ ಬಲ ಹೊಂದಿರುವ ಪಕ್ಷದ ಜನಪ್ರಿಯ ನಾಯಕ ವಿಪಕ್ಷದ ಸ್ಥಾನ ವಹಿಸುವುದು ಹೆಚ್ಚು ಸೂಕ್ತವೆನಿಸಲಿದೆ ಎಂದು ಅವರು ಹೇಳಿದ್ದಾರೆ.

ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ವಿರುದ್ಧ ತರೂರ್ 16,077 ಮತಗಳ ಅಂತರದ ಜಯ ಸಾಧಿಸಿದ್ದರು.

ವಯನಾಡ್ ಅಥವಾ ರಾಯ್‌ಬರೇಲಿ? ಇನ್ನೆರಡು ವಾರದೊಳಗೆ ನಿರ್ಧಾರ...

ರಾಯ್‌ಬರೇಲಿ ಹಾಗೂ ವಯನಾಡ್ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ರಾಹುಲ್ ಗಾಂಧಿ, ಯಾವ ಕ್ಷೇತ್ರವನ್ನು ಉಳಿಸಲಿದ್ದಾರೆ ಹಾಗೂ ಯಾವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂಬುದರ ಕುರಿತು ಇನ್ನೆರಡು ವಾರದೊಳಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಜಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಕೇಳಿದಾಗ, 'ನಾನು ಎರಡೂ ಕ್ಷೇತ್ರಗಳ ಸಂಸದನಾಗಿ ಉಳಿಯುತ್ತೇನೆ. ಆದರೆ ಎರಡೂ ಸ್ಥಾನದಲ್ಲಿರಲು ಸಾಧ್ಯವಿಲ್ಲ. ಯಾವ ಕ್ಷೇತ್ರದಲ್ಲಿ ಉಳಿಯುತ್ತೇನೆ ಎಂಬುದರ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.