ತಿರುವನಂತಪುರ: ವಿರೋಧ ಪಕ್ಷಗಳ ಕುರಿತು ವಂಶಾಡಳಿತ ರಾಜಕಾರಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಮೂದಲಿಕೆಗೆ ಪ್ರತಿಕ್ರಿಯಿಸಿರುವ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್, ‘ವಂಶಾಡಳಿತ ರಾಜಕಾರಣವು ಭಾರತದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇದು ದೇಶದ ಅತ್ಯಂತ ಹಳೆಯ ಪಕ್ಷದಲ್ಲಿ ಮಾತ್ರವಲ್ಲ, ಬಿಜೆಪಿಯೂ ಇದರಿಂದ ಹೊರತಾಗಿಲ್ಲ’ ಎಂದಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ವಂಶಪಾರಂಪರ್ಯ ಆಡಳಿತ ಎಂಬುದು ಭಾರತದ ಸಂದರ್ಭದಲ್ಲಿ ಹೊಸತೇನೂ ಅಲ್ಲ. ಇದು ಎಲ್ಲರಿಗೂ ಚಿರಪರಿಚಿತ ಸಂಗತಿ. ಭಾರತ ಮಾತ್ರವಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಈ ಪದ್ಧತಿ ಇದೆ. ತನ್ನ ಮಗ ತನ್ನದೇ ವೃತ್ತಿಯನ್ನು ಆಯ್ದುಕೊಳ್ಳಬೇಕೆಂಬುದು ತಂದೆಯ ಇಚ್ಛೆಯಾಗಿರುತ್ತದೆ. ಅದರಂತೆಯೇ ಕೆಲವು ಸಂದರ್ಭಗಳಲ್ಲಿ ತಾಯಿಯನ್ನೂ ಮಗಳು ಅನುಕರಿಸುತ್ತಾಳೆ. ಅದೇ ಪದ್ಧತಿ ಮುಂದುವರಿದಿದೆ. ಹಾಗೆಯೇ ಎಲ್ಲಾ ಪಕ್ಷಗಳಲ್ಲೂ ‘ಪರಿವಾರ ವಾದ’ ಎಂಬುದು ಇದೆ ಎನ್ನುವುದರಲ್ಲಿ ಯಾವುದೇ ಅಚ್ಚರಿ ಇಲ್ಲ’ ಎಂದು ತರೂರ್ ಹೇಳಿದ್ದಾರೆ.
‘ಬಿಜೆಪಿಯ ಕೆಲ ನಾಯಕರನ್ನು ಹೊರತುಪಡಿಸಿದರೆ, ಉಳಿದ ಸಚಿವರು ಹಾಗೂ ಸಂಸದರ ಮಗ ಅಥವಾ ಮಗಳು ರಾಜಕೀಯದಲ್ಲಿದ್ದಾರೆ. ಹೀಗಾಗಿ ಇತರ ಪಕ್ಷಗಳತ್ತ ಬೆರಳು ತೋರಿಸಿ ‘ಪರಿವಾರ ವಾದ’ ಎಂಬ ನರೇಂದ್ರ ಮೋದಿ ಅವರ ಆರೋಪಗಳಲ್ಲಿ ಯಾವುದೇ ನಿರ್ದಿಷ್ಟ ಸ್ಥಿರತೆ ಕಾಣಿಸುತ್ತಿಲ್ಲ’ ಎಂದು ತರೂರ್ ಹೇಳಿದ್ದಾರೆ.
‘ಆದರೆ ನನ್ನ ವಿಷಯದಲ್ಲಿ ನನ್ನ ತಂದೆಯೂ ರಾಜಕೀಯದಲ್ಲಿ ಇರಲಿಲ್ಲ. ನನ್ನ ಮಗನೂ ರಾಜಯಕೀಯದಲ್ಲಿ ಇಲ್ಲ’ ಎಂದು ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿವಾರ ವಾದ ಎಂಬ ಆರೋಪವನ್ನು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಡಿಎಂಕೆ ಹಾಗೂ ರಾಷ್ಟ್ರೀಯ ಜನತಾ ದಳದ ವಿರುದ್ಧ ಮಾಡಿದ್ದಾರೆ. ‘ಈ ಪಕ್ಷಗಳ ನಾಯಕರು ತಮ್ಮ ಸಂತತಿಯ ಹಿತವನ್ನೇ ಬಯಸುತ್ತಾರೆ’ ಎಂದು ಆರೋಪಿಸಿದ್ದರು.
ತಿರುವನಂತಪುರ ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧಿಸುತ್ತಿರುವ ಶಶಿ ತರೂರ್, ಕಾಂಗ್ರೆಸ್‌ನ ಪ್ರಣಾಳಿಕೆ ರಚನಾ ಸಮಿತಿಯ ಸದಸ್ಯರೂ ಹೌದು.
‘ನಮ್ಮ ಗಮನ ಏನಿದ್ದರೂ ಯುವಕರಿಗೆ ಹಾಗೂ ಮಹಿಳೆಯರಿಗೆ ನ್ಯಾಯ ನೀಡುವುದೇ ಆಗಿದೆ. ದೇಶದ ಭವಿಷ್ಯವೇ ಆಗಿರುವ ಯುವ ಸಮುದಾಯವನ್ನು ಈಗಿರುವ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. 20ರಿಂದ 24 ವರ್ಷದ ಯುವ ಸಮುದಾಯದವರ ನಿರುದ್ಯೋಗ ಪ್ರಮಾಣ ಶೇ 45.4ರಷ್ಟಿದೆ. ಅಸಮಾನತೆಯ ಪ್ರಮಾಣವಾಗಿರುವ ಇದು ವಿಶ್ವದಾಖಲೆಯೇ ಸರಿ’ ಎಂದಿದ್ದಾರೆ.
ವಯನಾಡ್‌ನಿಂದ ರಾಹುಲ್ ಗಾಂಧಿ ಅವರ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, ‘ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರದ ಹಾಲಿ ಸಂಸದ. ಹೀಗಾಗಿ ಅವರು ಅಲ್ಲಿಂದ ಸ್ಪರ್ಧಿಸುವ ಕುರಿತು ಯಾವುದೇ ಗೊಂದಲವಿಲ್ಲ’ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ವಯನಾಡ್ ಸ್ಪರ್ಧೆ ಕುರಿತು ಎಡಪಕ್ಷಗಳ ವಿರೋಧ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, ‘ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ, ತಿರುವನಂತಪುರದಲ್ಲಿ ನನ್ನ ವಿರುದ್ಧ ಏಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಮಂತ್ರಿ ಅಭ್ಯರ್ಥಿ ಕುರಿತ ಪ್ರತಿಕ್ರಿಯಿಸಿದ ತರೂರ್, ‘ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ. ಇಂಡಿಯಾ ಒಕ್ಕೂಟ ಬಹುಮತ ಪಡೆದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಇಬ್ಬರಲ್ಲಿ ಒಬ್ಬರು ಪ್ರಧಾನಿ ಆಗುವ ವಿಶ್ವಾಸವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.