ADVERTISEMENT

Election Results | ಟಿಎಂಸಿಗೆ ‘ಫಸಲು’: ಮಂಕಾದ ಬಿಜೆಡಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 0:29 IST
Last Updated 5 ಜೂನ್ 2024, 0:29 IST
<div class="paragraphs"><p>ಕೋಲ್ಕತ್ತದಲ್ಲಿ ಟಿಎಂಸಿ ಕಾರ್ಯಕರ್ತರು ಸಂಭ್ರಮಿಸಿದರು </p></div>

ಕೋಲ್ಕತ್ತದಲ್ಲಿ ಟಿಎಂಸಿ ಕಾರ್ಯಕರ್ತರು ಸಂಭ್ರಮಿಸಿದರು

   

ನವದೆಹಲಿ: ಪ್ರಮುಖ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಆಮ್‌ ಆದ್ಮಿ (ಎಎಪಿ) ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಗಮನ ಸೆಳೆದಿದ್ದರೆ, ಬಿಜು ಜನತಾದಳ (ಬಿಜೆಡಿ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಕಳೆಗುಂದಿವೆ.

ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿಯು ರಾಜ್ಯದ 29 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಳೆದ ಬಾರಿ 22 ಕ್ಷೇತ್ರಗಳಲ್ಲಿ ಜಯಿಸಿದ್ದ ಟಿಎಂಸಿ ಈ ಬಾರಿ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಶಕ್ತಿ ವೃದ್ಧಿಸಿಕೊಂಡಿದೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಎಂದು ಯೋಜಿಸಿ, ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ 12 ಸ್ಥಾನಗಳಿಗೆ ಕುಸಿದಿದೆ. ಕಳೆದ ಬಾರಿ ಅದು 18 ಕ್ಷೇತ್ರಗಳಲ್ಲಿ ಜಯಿಸಿತ್ತು. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಹಾಕುವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಸಂದೇಶ್‌ಖಾಲಿ ಪ್ರಕರಣ, ಶಿಕ್ಷಕರ ನೇಮಕಾತಿ ಪ್ರಕರಣಗಳು ಟಿಎಂಸಿಗೆ ತಲೆನೋವಾಗಿ ಪರಿಣಮಿಸಿದ್ದವು. ಅವುಗಳ ನಡುವೆಯೂ ಅದು 29 ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. 

ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರು ಡೈಮಂಡ್‌ ಹಾರ್ಬರ್‌ ಕ್ಷೇತ್ರದಲ್ಲಿ, ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭಿಜಿತ್‌ ದಾಸ್‌ ಅವರನ್ನು ಭಾರಿ ಅಂತರದಲ್ಲಿ ಸೋಲಿಸಿದ್ದಾರೆ.

ಸಂಸತ್ತಿನಿಂದ ಉಚ್ಚಾಟನೆಗೊಂಡಿದ್ದ ಟಿಎಂಸಿಯ ಮಹುವಾ ಮೊಯತ್ರಾ ಅವರು ಕೃಷ್ಣನಗರ ಕ್ಷೇತ್ರದಲ್ಲಿ, ಎದುರಾಳಿ ಬಿಜೆಪಿಯ ಅಮೃತಾ ರಾಯ್‌ ಅವರ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.

ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿಎಂಸಿ ಅಭ್ಯರ್ಥಿ ದೇವಾಂಶು ಭಟ್ಟಾಚಾರ್ಯ ಅವರು, ಮಾಜಿ ನ್ಯಾಯಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ ಅವರ ಎದುರು ಸೋತಿದ್ದಾರೆ. 

ಎಎಪಿ ಸಾಧನೆ: ಕಳೆದ ಬಾರಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಜಯಿಸಿದ್ದ ಎಎಪಿಯು ಈ ಬಾರಿ ಪಂಜಾಬಿನ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಆದರೆ ತನ್ನ ಆಡಳಿತವಿರುವ ದೆಹಲಿಯಲ್ಲಿ ತಾನು ಸ್ಪರ್ಧಿಸಿದ್ದ ನಾಲ್ಕೂ ಕ್ಷೇತ್ರಗಳಲ್ಲಿ ಸೋಲುಂಡಿದೆ.

ಒಡಿಶಾ ಆಡಳಿತ ಪಕ್ಷ ಬಿಜು ಜನತಾದಳ (ಬಿಜೆಡಿ) ಈ ಬಾರಿ ಕೇವಲ 1 ಕ್ಷೇತ್ರದಲ್ಲಿ ಜಯಿಸುವ ಮೂಲಕ ಕಳಪೆ ಸಾಧನೆ ಮಾಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 12 ಕ್ಷೇತ್ರಗಳಲ್ಲಿ ಬಿಜೆಡಿ ಗೆದ್ದಿತ್ತು.  2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದು ನೆಲಕಚ್ಚಿದ ಎಐಎಡಿಎಂಕೆ, ಈ ಬಾರಿ ಆ ಕ್ಷೇತ್ರದಲ್ಲೂ ಸೋಲುಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.