ADVERTISEMENT

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

ಪಿಟಿಐ
Published 16 ಏಪ್ರಿಲ್ 2024, 13:56 IST
Last Updated 16 ಏಪ್ರಿಲ್ 2024, 13:56 IST
<div class="paragraphs"><p>ರಾಕೇಶ ಟಿಕಾಯತ್</p></div>

ರಾಕೇಶ ಟಿಕಾಯತ್

   

ಪಿಟಿಐ ಚಿತ್ರ

ನವದೆಹಲಿ: ‘ಭಗವಾನ್ ರಾಮ ಭಾರತೀಯರಲ್ಲಿರುವ ದೈವಿಕವಾದ ಅನುಭವವೇ ಹೊರತು, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಸ್ತುವಲ್ಲ. ಆದರೆ ಈ ವಿಷಯದಲ್ಲಿ ಈ ದೇಶದ ಹಿಂದೂಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜಿಸಿದ್ದು, ನಾಗಪುರಿಯಾ (ಆರ್‌ಎಸ್‌ಎಸ್ ಮುಖ್ಯ ಶಾಖೆ) ಹಾಗೂ ಭಾರತೀಯ ಎಂಬ ಎರಡು ಪಂಗಡವನ್ನಾಗಿಸಿದೆ’ ಎಂದು ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ADVERTISEMENT

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ತಮ್ಮ ಸ್ವಾರ್ಥಕ್ಕಾಗಿ ಗ್ರಾಮ ಮಟ್ಟದಲ್ಲಿರುವ ದೇವಾಲಯಗಳನ್ನೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಶಪಡಿಸಿಕೊಳ್ಳುತ್ತಿವೆ. ರಾಮ ಎಂಬುದು ನಮ್ಮೆಲ್ಲರ ನಂಬಿಕೆ. ನಮ್ಮ ಹೃದಯ ಮತ್ತು ಆತ್ಮ. ಗ್ರಾಮದಲ್ಲಿರುವವರು ರಾಮನ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುವುದಿಲ್ಲ. ಪರಸ್ಪರ ಗೌರವಿಸುವಾಗ ನಮಸ್ತೆ ಅಥವಾ ಪ್ರಣಾಮ ಎಂದು ಹೇಳುವ ಬದಲು ’ರಾಮ್ ರಾಮ್‌’ ಎನ್ನುತ್ತಾರೆಯಷ್ಟೇ. ಆದರೆ ಇವರು ಮಾತ್ರ ರಾಮನ ಹೆಸರನ್ನು ರಾಜಕೀಯಕ್ಕೆ ತಂದು ನಿಲ್ಲಿಸಿದ್ದಾರೆ’ ಎಂದಿದ್ದಾರೆ.

ಬಿಜೆಪಿಯನ್ನು ಬೆಂಬಲಿಸದಿದ್ದರೆ ರಾಮನ ದೇಗುಲಕ್ಕೆ ಹೋಗುವಂತಿಲ್ಲವೇ...? ಎಲ್ಲರೂ ಹೋಗಬಹುದು. ಆದರೆ ದೇಶದಲ್ಲಿರುವ ಹಿಂದೂಗಳನ್ನು ನಾಗಪುರಿಯಾ ಹಿಂದೂಗಳೆಂದೂ ಹಾಗೂ ಮತ್ತೊಂದು ಗುಂಪನ್ನು ಭಾರತೀಯ ಹಿಂದೂಗಳು ಎಂದು ವಿಭಜಿಸಿದ್ದಾರೆ. ಹಾಗಿದ್ದರೆ ಇವರಿಗೆ ನಾಗಪುರದಿಂದ ಹಿಂದೂ ಪ್ರಮಾಣಪತ್ರ ಸಿಗಲಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

‘ಎಲ್ಲದಕ್ಕೂ ಜಾತಿಯನ್ನು ತಳಕು ಹಾಕುತ್ತಿರುವುದು ಈ ಚುನಾವಣೆಯ ಬಹುದೊಡ್ಡ ವಿಷಯ. ಈ ಬಾರಿ ಧರ್ಮ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬಹಳ ವರ್ಷಗಳ ನಂತರ ಜಾತಿಯನ್ನು ಎಳೆದು ತರಲಾಗುತ್ತಿದೆ’ ಎಂದು ಟಿಕಾಯತ್ ಹೇಳಿದ್ದಾರೆ.

ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘370ನೇ ವಿಧಿಯನ್ನು ಪ್ರತಿನಿಧಿಸುವಂತೆ 370 ಸೀಟುಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಬಿಜೆಪಿ ತನ್ನ ಮಿತ್ರ ಪಕ್ಷಗಳಿಗಿಂತಲೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬಲ್ಲದು ಎಂಬುದನ್ನು ತೋರಿಸುವ ಉದ್ದೇಶ ಹೊಂದಿದೆ’ ಎಂದಿದ್ದಾರೆ.

ಬಿಜೆಪಿ ಗೆಲುವಿನ ವಿಶ್ವಾಸದ ಹಿಂದಿದೆ ಅನುಮಾನ

‘ಅವರಿಗೆ 400 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸವಿದ್ದಲ್ಲಿ, ಚುನಾವಣೆಯ ಅಗತ್ಯವಾದರೂ ಏನಿದೆ? ಸರ್ಕಾರವನ್ನು ನವೀಕರಿಸುವ ಯೋಜನೆಯೊಂದನ್ನು ಜಾರಿಗೆ ತಂದರೆ ಸಾಕು. ಚುನಾವಣೆಗಾಗಿ ಸಾಕಷ್ಟು ಹಣ ಖರ್ಚು ಮಾಡುವುದಾದರೂ ಉಳಿಯಲಿದೆ. ವಾಸ್ತವದಲ್ಲಿ ಜನರು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಅವರು ಕರೆದ ಸಭೆಗಳಿಗೆ ಯಾರೊಬ್ಬರೂ ಹೋಗುತ್ತಿಲ್ಲ. ಆದರೆ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಈ ಸೀಟುಗಳು ಅವರಿಗೆ ಎಲ್ಲಿಂದ ಸಿಗುತ್ತಿವೆ? ಇದರಲ್ಲಿ ಏನೋ ಒಳಸಂಚು ಇದೆ ಎಂದೆನಿಸುವುದಿಲ್ಲವೇ?’ ಎಂದು ಟಿಕಾಯತ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಸೋಲುವುದು ಖಚಿತವಾಗಿರುವುದನ್ನು ಅರಿತಿರುವ ವಿರೋಧ ಪಕ್ಷಗಳ ನಾಯಕರು ವಿದ್ಯುನ್ಮಾನ ಮತಯಂತ್ರದ ಮೇಲೆ ಆರೋಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.