ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೇಲಿ ಮಾಡಿದ್ದಾರೆ. ರಾಹುಲ್, ರಾಯ್‌ಬರೇಲಿಯಲ್ಲೂ ಭಾರಿ ಅಂತರದಿಂದ ಮುಖಭಂಗ ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬುಡಕಟ್ಟು ಸಮುದಾಯದವರೇ ಬಹುಸಂಖ್ಯೆಯಲ್ಲಿರುವ ಛೋಟಾ ಉದಯ್‌ಪುರ ಜಿಲ್ಲೆಯ ಬೊದೆಲಿ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಅಮಿತ್ ಶಾ ಇಂದು (ಶನಿವಾರ) ಮಾತನಾಡಿದ್ದಾರೆ.
'ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ರಾಹುಲ್ ಅಮೇಠಿಯಲ್ಲಿ ಸೋಲು ಕಾಣುತ್ತಿದ್ದಂತೆ, ಕೇರಳದ ವಯನಾಡ್‌ಗೆ ಓಡಿದರು. ಈ ಬಾರಿ ವಯನಾಡ್‌ನಲ್ಲಿಯೂ ಸೋಲು ಖಾತ್ರಿಯಾಗಿದ್ದು, ಅಮೇಠಿ ಬದಲು ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದಾರೆ' ಎಂದು ತಿವಿದಿದ್ದಾರೆ.
ರಾಹುಲ್ ಗಾಂಧಿ 2019ರ ಚುನಾವಣೆಯಲ್ಲಿ ಅಮೇಠಿ ಹಾಗೂ ವಯನಾಡ್ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ವಯನಾಡ್‌ನಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರಾದರೂ, ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋಲು ಕಂಡಿದ್ದರು.
'ರಾಹುಲ್ ಬಾಬಾ, ನನ್ನ ಸಲಹೆ ಆಲಿಸಿ. ಸಮಸ್ಯೆ ಇರುವುದು ನಿಮ್ಮಲ್ಲಿ, ಕ್ಷೇತ್ರಗಳಲ್ಲಿ ಅಲ್ಲ. ನೀವು ರಾಯ್‌ಬರೇಲಿಯಲ್ಲೂ ಭಾರಿ ಅಂತರದಿಂದ ಸೋಲುತ್ತೀರಿ. ನೀವು ಎಲ್ಲಿಗೆ ಓಡಿ ಹೋದರೂ, ಜನರೇ ಹುಡುಕಿ ಸೋಲಿಸುತ್ತಾರೆ' ಎಂದು ಲೇವಡಿ ಮಾಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ಆಯ್ಕೆಯಾದರೆ, ಮೀಸಲಾತಿಯನ್ನು ತೆಗೆದುಹಾಕುತ್ತಾರೆ ಎಂದು ರಾಹುಲ್ ಬಾಬಾ ಹಾಗೂ ಅವರ ಗುಂಪು ಸುಳ್ಳು ಹರಡುತ್ತಿದೆ' ಎಂದೂ ಶಾ ದೂರಿದ್ದಾರೆ.
'ರಾಹುಲ್ ಬಾಬಾ, ಮೋದಿ ಅವರು 2014 ಮತ್ತು 2019ರಲ್ಲಿ ಪೂರ್ಣ ಬಹುಮತ ಹೊಂದಿದ್ದರು. ಆದರೂ, ದಲಿತರು, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಮೀಸಲಾತಿಯ ವಿಚಾರಕ್ಕೆ ಹೋಗಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಮೀಸಲಾತಿ ವಿಚಾರಕ್ಕೆ ಕೈಹಾಕಲು ಯಾರನ್ನೂ ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ' ಎಂದು ಒತ್ತಿಹೇಳಿದ್ದಾರೆ.
ಇದೇ ವೇಳೆ ಅವರು, ದಲಿತರು, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಹಲವು ರಾಜ್ಯಗಳಲ್ಲಿ ಕಸಿದು ಮುಸ್ಲಿಮರಿಗೆ ಹಂಚುತ್ತಿದೆ ಎಂದು ಆರೋಪಿಸಿದ್ದಾರೆ.
ಗುಜರಾತ್‌ನಲ್ಲಿ 26 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು, ಉಳಿದ 8 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ಕಾರಣ ದಲಾಲ್ ಅವರಿಗೆ ಚುನಾವಣೆಗೂ ಮುನ್ನವೇ ಅದೃಷ್ಟ ಒಲಿದಿದೆ.
ಉಳಿದ 25 ಸ್ಥಾನಗಳಿಗೆ ಮೇ 7ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.