ADVERTISEMENT

ಇಂಡಿಯಾ ಕೂಟ ಸೇರ್ಪಡೆ ವಿಚಾರ: ಕಾದು ನೋಡಿ ಎಂದ ತೇಜಸ್ವಿ ಯಾದವ್

ಪಿಟಿಐ
Published 5 ಜೂನ್ 2024, 12:21 IST
Last Updated 5 ಜೂನ್ 2024, 12:21 IST
ಬಿಹಾರದ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಪಟ್ನಾದಿಂದ ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು–ಪಿಟಿಐ ಚಿತ್ರ
ಬಿಹಾರದ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಪಟ್ನಾದಿಂದ ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು–ಪಿಟಿಐ ಚಿತ್ರ   

ನವದೆಹಲಿ: ಟಿಡಿಪಿ ಮತ್ತು ಜೆಡಿಯು ಪಕ್ಷಗಳು ‘ಇಂಡಿಯಾ’ ಕೂಟವನ್ನು ಸೇರುವವೇ ಎನ್ನುವ ಬಗ್ಗೆ ತೀವ್ರ ಕುತೂಹಲ ಹುಟ್ಟಿಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ‘ಕಾದು ನೋಡಿ’ ಎಂದು ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಿಸಿದ ವಿಮಾನದಲ್ಲೇ ತೇಜಸ್ವಿ ಪಟೇಲ್ ಪಟ್ನಾದಿಂದ ದೆಹಲಿಗೆ ಬಂದದ್ದು ಹಲವು ಅನುಮಾನಗಳಿಗೆ ಇಂಬು ನೀಡಿತು. ನಿತೀಶ್ ಅವರನ್ನು ‘ಇಂಡಿಯಾ’ ಕೂಟಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಸಲಾಯಿತೇ ಎನ್ನುವ ಬಗ್ಗೆ ಮಾತನಾಡಿದ ಅವರು, ವಿಮಾನದಲ್ಲಿ ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ನಡೆಯಿತು ಅಷ್ಟೇ ಎಂದು ಹೇಳಿದರು.

ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಅಗತ್ಯವಾದ ಸಂಖ್ಯೆಯನ್ನು ಕ್ರೋಡೀಕರಿಸುವ ನಿಟ್ಟಿನಲ್ಲಿ ವಿರೋಧಿ ಒಕ್ಕೂಟ ನಿರತವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಇಲ್ಲಿಗೆ ಸಭೆ ಸೇರಲು ಬಂದಿದ್ದೇವೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಿ’ ಎಂದು ತಿಳಿಸಿದರು.

ADVERTISEMENT

‘ಬಿಹಾರ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದೆ. ಯಾವುದೇ ಸರ್ಕಾರ ಬರಲಿ, ಕಿಂಗ್‌ಮೇಕರ್‌ ಆದವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ, ನಾವು ನೀಡಿರುವ ಶೇ 75ರಷ್ಟು ಮೀಸಲಾತಿಯನ್ನು 9ನೇ ಶೆಡ್ಯೂಲ್ ಅಡಿ ತರುವುದು ಮತ್ತು ಜಾತಿಗಣತಿ ನಡೆಸುವುದನ್ನು ಮಾಡಬೇಕಿದೆ’ ಎಂದು ಹೇಳಿದರು. 

ಫೈಜಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಗೆಲುವನ್ನು ಶ್ಲಾಘಿಸಿದ ಅವರು, ‘ನಾವು ಅಯೋಧ್ಯೆಯನ್ನು ಗೆದ್ದಿದ್ದೇವೆ. ಪ್ರಧಾನಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದರು. ರಾಮ ಅವರಿಗೆ ಪಾಠ ಕಲಿಸಿದ್ದಾನೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.