ADVERTISEMENT

ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2024, 16:26 IST
Last Updated 21 ಮೇ 2024, 16:26 IST
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ   

ನವದೆಹಲಿ: ‘ರಾಜಕೀಯ ಪ್ರವೇಶದ ಉದ್ದೇಶ ಹೊಂದಿದ್ದು, ಅದು ನಾನು ಕೈಗೊಂಡಿರುವ ಕೆಲಸದ ಆಧಾರದ ಮೇಲೆಯೇ ಹೊರತು, ಗಾಂಧಿ ಕುಟುಂಬದ ಹೆಸರಿನ ಬಲದಿಂದಲ್ಲ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿರುವ ವಾದ್ರಾ, ‘ ಒಂದೊಮ್ಮೆ ಪಕ್ಷ ಬಯಸಿದರೆ ಈ ಬಾರಿ ಅಲ್ಲದಿದ್ದರೂ, ಮುಂದಿನ ಬಾರಿಯಾದರೂ ನಾನು ಸ್ಪರ್ಧಿಸುವೆ. ಸಮಾಜ ಸೇವೆಗೆ ನಾನು ಬದ್ಧನಾಗಿದ್ದೇನೆ. ನನ್ನ ಉದ್ದೇಶ ನೈಜವಾಗಿವೆಯೇ ಹೊರತು, ಅದರ ಹಿಂದೆ ರಾಜಕೀಯ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಜಕೀಯ ಪ್ರವೇಶ ನನಗೆ ಸುಲಭ. ಆದರೆ, ಅದಕ್ಕೆ ನನ್ನ ಕೆಲಸ ಮಾರ್ಗವಾಗಬೇಕೇ ಹೊರತು. ಗಾಂಧಿ ಕುಟುಂಬವಾಗಬಾರದು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ.

ADVERTISEMENT

‘ನನ್ನ ರಾಜಕೀಯ ಪ್ರವೇಶಕ್ಕೆ ಜನರಿಂದಲೂ ಒತ್ತಡವಿದೆ. ನಾನು ಸಂಸದನಾಗಬೇಕು ಎಂಬುದು ಅವರ ಆಸೆ. ಆದರೆ ಈಬಾರಿ ಸ್ಪರ್ಧಿಸುತ್ತಿಲ್ಲ ಎಂಬ ಬೇಸರ ನನಗಿದೆ. ಆದರೆ ಮುಂದಿನ ಬಾರಿ ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುವೆ’ ಎಂದು ವಾದ್ರಾ ಹೇಳಿದ್ದಾರೆ.

‘ಗಾಂಧಿ ಕುಟುಂಬದ ಹೆಸರು ನಾನು ಹೇಳದಿದ್ದರೂ, ರಾಜಕೀಯದಲ್ಲಿ ಬಿಜೆಪಿ ನನ್ನ ಹೆಸರನ್ನು ಎಳೆದುತರುತ್ತಿದೆ. ದೇಶದ ವಿವಿಧ ಪಕ್ಷಗಳು ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸುತ್ತಿವೆ. ಸಕ್ರಿಯ ರಾಜಕಾರಣಕ್ಕೆ ಬರುವಂತೆ ದೇಶದ ವಿವಿಧ ಭಾಗಗಳಿಂದಲೂ ಕರೆಗಳು ಬರುತ್ತಿವೆ. ಆದರೆ ನಾನು ನನ್ನ ರಾಜಕೀಯ ಪ್ರವೇಶಕ್ಕೆ ನನ್ನದೇ ಆದ ಅಂಕಣವನ್ನು ಸಜ್ಜುಗೊಳಿಸಬೇಕೆಂದಿದ್ದೇನೆ’ ಎಂದಿದ್ದಾರೆ.

‘ದೆಹಲಿ ಎನ್‌ಸಿಆರ್, ಹರಿಯಾಣ, ಮೊರಾದಾಬಾದ್ ಹಾಗೂ ಮಧ್ಯಪ್ರದೇಶದಿಂದ ಸ್ಪರ್ಧಿಸುವ ಮನಸ್ಸಿದೆ. ಆದರೆ ಸದ್ಯದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಕ್ರಮಕ್ಕೆ ಮುಂದಾಗಿವೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಇಂಥ ಕೆಲಸ ಸರಿಯಲ್ಲ. ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು 15 ಬಾರಿ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಇವೆಲ್ಲವೂ ನನ್ನನ್ನು ಗಟ್ಟಿಗೊಳಿಸಿವೆ’ ಎಂದು ಹೇಳಿದ್ಧಾರೆ.

‘ನನ್ನ ಪತ್ನಿ ಪ್ರಿಯಾಂಕಾಗೆ ನೀಡುತ್ತಿರುವ ಭದ್ರತೆ ಸಾಲದು. ಕೋವಿಡ್ ಸಂದರ್ಭದಲ್ಲಿ ಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ರಾಜೀವ್ ಗಾಂಧಿ ಅವರು ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಮೃತಪಟ್ಟರು. ಇಂದಿರಾಗಾಂಧಿ ಅವರ ದೇಹಕ್ಕೆ 33 ಗುಂಡುಗಳು ಹೊಕ್ಕಿದ್ದವು. ಇವರಿಬ್ಬರು ದೇಶಕ್ಕಾಗಿ ಪ್ರಾಣ ನೀಡಿದ್ದಾರೆ’ ಎಂದು ವಾದ್ರಾ ಹೇಳಿದ್ದಾರೆ.

ಚುನಾವಣೆ ನಂತರ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ರಾಬರ್ಟ್ ವಾದ್ರಾ, ‘ಜನರು ಬದಲಾವಣೆ ಬಯಿಸಿದ್ದಾರೆ. ರೈತರು ಹತಾಷರಾಗಿದ್ದಾರೆ. ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಸಿಲುಕಿದೆ. ಆದರೆ ಸಾಮಾಜಿಕ ತಾಣಗಳಲ್ಲಿ ಯಾವುದನ್ನೂ ಬಚ್ಚಿಡಲು ಸಾಧ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಒಕ್ಕೂಟದ ಫಲಿತಾಂಶ ಉತ್ತಮವಾಗಿರಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.