ADVERTISEMENT

ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಮೋದಿ ಸಂಪುಟ ಸೇರುತ್ತಿರುವ ಸೋಮಣ್ಣ

ಪಿಟಿಐ
Published 9 ಜೂನ್ 2024, 11:37 IST
Last Updated 9 ಜೂನ್ 2024, 11:37 IST
<div class="paragraphs"><p> ವಿ. ಸೋಮಣ್ಣ</p></div>

ವಿ. ಸೋಮಣ್ಣ

   

ನವದೆಹಲಿ: ತನ್ನನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವ ಪಕ್ಷದ ನಾಯಕರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತುಮಕೂರು ಸಂಸದ ವಿ. ಸೋಮಣ್ಣ ಹೇಳಿದ್ದಾರೆ.

ಇಂಥದ್ದೇ ಖಾತೆ ಬೇಕೆಂಬ ನಿರೀಕ್ಷೆ ಇಲ್ಲ. ಪ್ರಧಾನಿ ಮೋದಿ ನೀಡುವ ಯಾವುದೇ ಖಾತೆಯನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಸರ್ಕಾರದ ಸವಲತ್ತು ಜನರಿಗೆ ತಲುಪಿಸಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ADVERTISEMENT

ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಪಕ್ಷ ನನಗೆ ಅವಕಾಶ ನೀಡಿತ್ತು. ಅಲ್ಲಿಂದ ಗೆದ್ದು ಬಂದಿದ್ದೇನೆ. ಪಕ್ಷ ನೀಡಿದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಅವನ್ನೆಲ್ಲ ಪರಿಗಣಿಸಿ ಸಚಿವ ಸ್ಥಾನದ ಅವಕಾಶ ನೀಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕತ್ವ ಮತ್ತು ತುಮಕೂರು ಜನತೆ, ಜೆಡಿಎಸ್‌, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಮೋದಿ ಜೊತೆಗಿನ ಟೀ ಪಾರ್ಟಿ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, 45 ವರ್ಷಗಳ ರಾಜಕೀಯ ಅನುಭವ ಬಳಸಿಕೊಂಡು ತನಗೆ ನೀಡಿರುವ ಜವಾಬ್ದಾರಿ ನಿರ್ವಹಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರದ ಸವಲತ್ತು ದದೇಶದ ಎಲ್ಲ ಜನರಿಗೆ ಸಮಾನವಾಗಿ ತಲುಪಿಸುವ ಸವಾಲು ನನ್ನ ಮೇಲಿದೆ ಎಂದಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ 1,75,594 ಮತಗಳ ಅಂತರದಿಂದ ಕಾಂಗ್ರೆಸ್‌ನ ಮುದ್ದಹನುಮೇಗೌಡರನ್ನು ಸೋಲಿಸಿ ಸೋಮಣ್ಣ ಸಂಸದರಾಗಿ ಆಯ್ಕೆಯಾಗಿದ್ದರು.

ಮೋದಿ ಸಭೆ ಬಗ್ಗೆ ಮಾತನಾಡಿದ ಅವರು, ‘ಸ್ನೇಹಮಯ ರೀತಿಯಲ್ಲಿ ಮಾತನಾಡಿದ ಮೋದಿ ಹಲವು ವಿಷಯಗಳ ಕುರಿತಂತೆ ನಮಗೆ ಸಲಹೆ ನೀಡಿದರು. ತಮಗೆ ಸಚಿವ ಸ್ಥಾನ ನೀಡಿರುವ ಉದ್ದೇಶವನ್ನು ಅರಿತು ಕೆಲಸ ಮಾಡಬೇಕೆಂದು ಸೂಚಿಸಿದರು’ ಎಂದು ಹೇಳಿದ್ದಾರೆ.

ಇಂದು ರಾತ್ರಿ 7.15ಕ್ಕೆ ರಾಷ್ಟ್ರಪತಿಭವನದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ವಿ. ಸೋಮಣ್ಣ, ಎಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆ ಮೋದಿ ಸಂಪುಟ ಸೇರುವುದು ಖಚಿತಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.