ನವದೆಹಲಿ: ಉತ್ತರಪ್ರದೇಶದ ರಾಮಪುರ ಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳಿಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ನಿಯಮಗಳ ಅನುಸಾರ ಕಾಯ್ದಿಡಲಾಗುವುದು ಎಂದು ಚುನಾವಣಾ ಆಯೋಗವು ದೆಹಲಿ ಹೈಕೋರ್ಟ್‌ಗೆ ಹೇಳಿದೆ.
ಕ್ಷೇತ್ರದ ಅಭ್ಯರ್ಥಿ, ವಕೀಲ ಮೆಹಮೂದ್ ಪ್ರಾಚಾ ಅವರು ಈ ಕುರಿತಂತೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿ, ಆಯೋಗ ಈ ಮಾತು ಹೇಳಿದೆ.
ಆಯೋಗವನ್ನು ಪ್ರತಿನಿಧಿಸಿದ್ದ ವಕೀಲ ಸಿದ್ಧಾಂತ್ ಕುಮಾರ್ ಅವರು, ಯಾವುದೇ ಸಂದರ್ಭದಲ್ಲಿ ವಿಡಿಯೊ ಅಥವಾ ಸಿ.ಸಿ.ಟಿ.ವಿ ದೃಶ್ಯಾವಳಿಗಳ ರಕ್ಷಣೆಗೆ ಚುನಾವಣಾ ಆಯೋಗವು ಬದ್ಧರಾಗಿರಲಿದೆ ಎಂದು ತಿಳಿಸಿದರು.
ಆಯೋಗದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಸಚಿನ್ ದತ್ತಾ ಅವರು, ‘ಅರ್ಜಿದಾರರು ಮತ್ತಾವುದೇ ಬೇಡಿಕೆ ಮಂಡಿಸುವಂತಿಲ್ಲ. ಆಯೋಗದ ಹೇಳಿಕೆ ಪರಿಗಣಿಸಿ ಈ ಅರ್ಜಿ ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.