ಲೋಕಸಭಾ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ ಇದ್ದಾಗ ಕೇಂದ್ರ ಸರ್ಕಾರವು ಐವರಿಗೆ ‘ಭಾರತ ರತ್ನ’ ಘೋಷಿಸಿತ್ತು. ಚುನಾವಣೆಯ ಲೆಕ್ಕಾಚಾರದಿಂದ ಆಡಳಿತಾರೂಢ ಎನ್‍ಡಿಎ ಸರ್ಕಾರವು ಈ ಪ್ರಶಸ್ತಿಯನ್ನು ಘೋಷಿಸಿದೆ ಎಂಬ ಟೀಕೆಗಳು ವಿರೋಧ ಪಕ್ಷಗಳಿಂದ ವ್ಯಕ್ತವಾಗಿದ್ದವು. ದೇಶಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಈ ಐದು ಮಂದಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ್ದೇವೆ ಎಂದು ಬಿಜೆಪಿಯು ಸಮರ್ಥಿಸಿಕೊಂಡಿತ್ತು. ‘ಭಾರತ ರತ್ನ’ ನೀಡಿಕೆಯ ಹಿಂದೆ ಚುನಾವಣಾ ಲೆಕ್ಕಾಚಾರ ಇದೆ ಎಂಬುದನ್ನು ಅಲ್ಲಗಳೆಯುವುದು ಕಷ್ಟ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರತಿ ಬಾರಿ ಫೋಷಣೆಯಾದಾಗಲೂ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಈ ಬಾರಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಆಡಳಿತಾರೂಢ ಪಕ್ಷವು ಐದು ಮಂದಿಗೆ ಈ ಅತ್ಯುನ್ನತ ಪುರಸ್ಕಾರವನ್ನು ಘೋಷಿಸಿರುವುದರ ಹಿಂದೆ ಬಿಜೆಪಿಯ ಮತ ಲೆಕ್ಕಾಚಾರದ ತಂತ್ರಗಾರಿಕೆ ಅಡಗಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
400ಕ್ಕಿಂತಲೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆಂಬ ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿದಿನ ಮೊಳಗಿಸುತ್ತಿದ್ದಾರೆ. ಈ ಗುರಿಯನ್ನು ಮುಟ್ಟಬೇಕಾದರೆ ಕೇವಲ ಉತ್ತರ ಭಾರತದಲ್ಲಿ ಪಕ್ಷವು ಪಾರಮ್ಯ ಮೆರೆದರೆ ಸಾಲದು, ದಕ್ಷಿಣದಲ್ಲೂ ಉತ್ತಮ ಸಾಧನೆ ಮಾಡಬೇಕಾಗುತ್ತದೆ. ದಕ್ಷಿಣದ ಇಬ್ಬರಿಗೆ ಈ ಗೌರವ ಒಲಿದಿರುವುದು ಬಿಜೆಪಿಯ ಈ ಲೆಕ್ಕಾಚಾರಕ್ಕೆ ಪುಷ್ಟಿ ನೀಡಿದೆ.
ಕಾಂಗ್ರೆಸ್ ಧುರೀಣರಾಗಿದ್ದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್, ಬಿಜೆಪಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಎಲ್.ಕೆ.ಅಡ್ವಾಣಿ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಈ ಪುರಸ್ಕಾರ ಸಂದಿದೆ. 1999ರಲ್ಲಿ ನಾಲ್ಕು ಮಂದಿಗೆ ‘ಭಾರತ ರತ್ನ’ ನೀಡಿರುವುದು ಬಿಟ್ಟರೆ, ಒಂದೇ ವರ್ಷದಲ್ಲಿ ಅತಿ ಹೆಚ್ಚು ಮಂದಿಗೆ ಈ ಪ್ರಶಸ್ತಿ ನೀಡಿರುವುದು ಇದೇ ಮೊದಲು.
ಹಿಂದುಳಿದ ವರ್ಗಗಳ ಓಲೈಕೆಗೆ ಯತ್ನ: ಹಿಂದುಳಿದ ಮತ್ತು ತೀರಾ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅವಿರತ ಶ್ರಮಿಸಿದ್ದ ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಈ ವರ್ಗಗಳಿಗೂ ಪ್ರಾಮುಖ್ಯ ನೀಡಲಾಗಿದೆ ಎಂಬ ಸಂದೇಶವನ್ನು ಬಿಜೆಪಿಯು ರವಾನಿಸಿದೆ. ಸಮಾಜವಾದಿ ನಾಯಕ ಕರ್ಪೂರಿ ಅವರಿಗೆ ಈ ಪ್ರಶಸ್ತಿಯನ್ನು ನೀಡಬೇಕೆಂಬುದು ಬಿಹಾರದ ಜನರ ಬಹುಕಾಲದ ಬೇಡಿಕೆಯೂ ಆಗಿತ್ತು. ಅದು ಈಗ ಈಡೇರಿದೆ. 1970ರ ದಶಕದ ಕೊನೆಯಲ್ಲಿ ಮುಂಗೇರಿ ಲಾಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಯತ್ನವನ್ನು ಇವರು ಮಾಡಿದ್ದರು. ವಿರೋಧ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ಜಾತಿಗಣತಿಯನ್ನು ಮುಖ್ಯ ವಿಷಯವಾಗಿಸಿರುವ ಕಾರಣ, ತಾವೂ ಮೀಸಲಾತಿಯ ಪರ ಇದ್ದೇವೆ ಎಂಬುದನ್ನು ಬಿಂಬಿಸಲು ಬಿಜೆಪಿಯು ಈ ಮೂಲಕ ಪ್ರಯತ್ನಿಸಿದೆ. ಬಿಹಾರದಲ್ಲಿ ಎನ್‍ಡಿಎ ಮೈತ್ರಿ ತೊರೆದಿದ್ದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕೂಡ ತಮ್ಮ ಪಕ್ಷವನ್ನು ಮತ್ತೆ ಎನ್‍ಡಿಎ ಮೈತ್ರಿಕೂಟಕ್ಕೆ ಸೇರಿಸಿದ್ದಾರೆ.
ರೈತರ ಕೋಪ ಶಮನವಾಗುವುದೇ?: ‘ಭಾರತದ ರೈತರ ಚಾಂಪಿಯನ್’ ಎಂದೇ ಪ್ರಸಿದ್ಧರಾಗಿರುವ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ಜಾಟ್ ಸಮುದಾಯದವರಾಗಿದ್ದು, ಈ ಸಮುದಾಯದವರು ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ವ್ಯಕ್ತಿಗೆ ಅತ್ಯುನ್ನತ ಪ್ರಶಸ್ತಿ ನೀಡುವ ಮೂಲಕ ಇವರ ವಿಶ್ವಾಸಗಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ಆಮೂಲಾಗ್ರ ಭೂಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರದಲ್ಲಿ ಏಕರೂಪತೆಯನ್ನು ತಂದ ಕೀರ್ತಿ ಚೌಧರಿ ಅವರಿಗೆ ಸಲ್ಲುತ್ತದೆ. ಎಂಎಸ್‍ಪಿಗೆ ಕಾನೂನಿನ ಖಾತರಿ ನೀಡಬೇಕೆಂದು ಆಗ್ರಹಿಸಿ ರೈತರು ಮತ್ತೆ ಹೋರಾಟಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದ ಹೊತ್ತಿನಲ್ಲೇ ಇವರಿಗೆ ಈ ಪ್ರಶಸ್ತಿಯು ಘೋಷಣೆಯಾಗಿತ್ತು. ಚೌಧರಿ ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಪುಳಕಿತರಾಗಿರುವ ಅವರ ಮೊಮ್ಮಗ ಜಯಂತ್ ಚೌಧರಿ ಅವರು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಲೋಕ ದಳವನ್ನು ಮತ್ತೆ ಎನ್‍ಡಿಎ ತೆಕ್ಕೆಗೆ ಸೇರಿಸಿದ್ದಾರೆ. ಇದರಿಂದ ಉತ್ತರ ಪ್ರದೇಶದಲ್ಲಿ ಎನ್‍ಡಿಎಗೆ ಇನ್ನಷ್ಟು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.
ಪಕ್ಷದೊಳಗಿನ ಬೇಗುದಿ ಶಮನಕ್ಕೆ ಯತ್ನ: ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು. ರಥಯಾತ್ರೆಯ ಮೂಲಕ ದೇಶದಾದ್ಯಂತ ಜನರನ್ನು ರಾಮಮಂದಿರಕ್ಕಾಗಿ ಒಗ್ಗೂಡಿಸಲು ಪ್ರಯತ್ನಿಸಿದ್ದ ಅವರಿಗೆ ಮಂದಿರ ಸಾಕಾರವಾಗಿರುವ ವೇಳೆಯಲ್ಲಿ ಪ್ರಶಸ್ತಿ ನೀಡಿದರೆ ಪಕ್ಷದೊಳಗಿನವರಿಗೆ ಹಿತವಾಗುತ್ತದೆ ಎಂಬ ಲೆಕ್ಕಾಚಾರವು ಈ ಪ್ರಶಸ್ತಿ ನೀಡಿರುವುದರ ಹಿಂದಿರಬಹುದು ಎನ್ನಲಾಗುತ್ತಿದೆ. ಅಡ್ವಾಣಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪವು ಕೆಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಈ ಆರೋಪವನ್ನು ತೊಡೆದುಹಾಕಲು ಈ ಅತ್ಯುನ್ನತ ಪ್ರಶಸ್ತಿಗೆ ಸಾಧ್ಯವಾಗಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರದ್ದಾಗಿರಬಹುದು.
ಕಾಂಗ್ರೆಸ್‍ಗೆ ಏಟು: ಅವಿಭಜಿತ ಆಂಧ್ರಪ್ರದೇಶದಲ್ಲಿ ರಾಜಕೀಯ ಪ್ರವೇಶಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ಪಿ.ವಿ. ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಪಕ್ಷವು ನಿರ್ಲಕ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನಿಂದಲೂ ಆರೋಪ ಮಾಡುತ್ತಿದ್ದರು. ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಾವ್ ಅವರು ಭಾರತದ ಆರ್ಥಿಕತೆಗೆ ವಿವಿಧ ಸುಧಾರಣೆಗಳನ್ನು ಪರಿಚಯಿಸಿದವರು. ರಾವ್ ಅವರಿಗೆ ಈ ಗೌರವ ನೀಡಿರುವುದರಿಂದ ಅಲ್ಲಿನ ಜನರು ಪಕ್ಷದತ್ತ ಒಲವು ತೋರಬಹುದೆಂಬ ಲೆಕ್ಕಾಚಾರ ಬಿಜೆಪಿಯದ್ದು. ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಚಿತ್ರನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಗಳ ಜೊತೆ ಎನ್‍ಡಿಎ ಮೈತ್ರಿ ಮಾಡಿಕೊಂಡಿದ್ದು, ಉತ್ತಮ ಸಾಧನೆ ತೋರುವ ನಿರೀಕ್ಷೆಯಲ್ಲಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡುವ ವೇಳೆ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು ಎಂಬುದು ಗಮನಾರ್ಹ ವಿಚಾರ.
ತಮಿಳುನಾಡಿನ ಮತದಾರರತ್ತ ಚಿತ್ತ: ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ನೇತೃತ್ವದಲ್ಲಿ ಪಕ್ಷಕ್ಕೆ ಭದ್ರ ನೆಲೆ ಸ್ಥಾಪಿಸಲು ಬಿಜೆಪಿಯ ವರಿಷ್ಠರು ಹಲವು ವರ್ಷಗಳಿಂದಲೂ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಲ್ಲಿ ಎನ್‍ಡಿಎ ಒಕ್ಕೂಟದ ಜೊತೆಗಿದ್ದ ಎಐಎಡಿಎಂಕೆ ಕೂಡ ಈ ಬಾರಿ ಬಿಜೆಪಿ ಜೊತೆಗಿನ ನಂಟು ಕಡಿದುಕೊಂಡಿದೆ. ಭಾಷೆ, ಅಸ್ತಿತ್ವದ ಬಗ್ಗೆ ಸದಾ ಜಾಗೃತರಾಗಿರುವ ತಮಿಳರನ್ನು ಓಲೈಸಲು ಬಿಜೆಪಿ ಬತ್ತಳಿಕೆಯಲ್ಲಿ ಈ ಸಲ ಯಾವುದೇ ಅಸ್ತ್ರವಿರಲಿಲ್ಲ. ಇದೇ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಅವರಿಗೆ ‘ಭಾರತರತ್ನ’ ಘೋಷಿಸಲಾಗಿತ್ತು. ಸ್ವಾಮಿನಾಥನ್ ಅವರು ಕೃಷಿ ತಜ್ಞರಾಗಿ ಮನೆ ಮಾತಾದವರು. ದಕ್ಷಿಣ ಭಾರತದ ಈ ಮೇರು ವ್ಯಕ್ತಿಗೆ ಪ್ರಶಸ್ತಿ ನೀಡಿದರೆ ತಮಿಳುನಾಡಿನ ಜನರು ಪಕ್ಷದ ಜೊತೆ ಭಾವನಾತ್ಮಕ ನಂಟು ಹೊಂದಬಹುದೆಂಬ ಲೆಕ್ಕಾಚಾರವು ಬಿಜೆಪಿಯದ್ದಾಗಿರಬಹುದು. ತಮಿಳುನಾಡಿನ ಎಲ್ಲಾ ಕ್ಷೇತ್ರಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆದಿದ್ದು. ಕಮಲ ಪಕ್ಷದ ನಾಯಕರು ಶುಭ ನಿರೀಕ್ಷೆಯಲ್ಲಿದ್ದಾರೆ.
ಹಿಂದೆಯೂ ವಿವಾದ: 2013ರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ‘ಭಾರತ ರತ್ನ’ ಘೋಷಿಸಿದಾಗ ವಿರೋಧ ವ್ಯಕ್ತವಾಗಿತ್ತು. ಯುಪಿಎ ಸರ್ಕಾರವು ಚುನಾವಣೆಯ ದೃಷ್ಟಿಯಿಂದ ಸಚಿನ್ ಅವರಿಗೆ ಪ್ರಶಸ್ತಿ ನೀಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.