ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದ ಮೂರನೇ ತಲೆಮಾರಿನ ಕುಡಿ ಪ್ರಜ್ವಲ್ ರೇವಣ್ಣ ಚೊಚ್ಚಲ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ನವ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ ಇಲ್ಲದ ಪ್ರಜ್ವಲ್, ಕುಟುಂಬ ರಾಜಕೀಯ ಆರೋಪದ ನಡುವೆಯೂ ಗೆಲುವಿನ ದಡ ತಲುಪಿ ದೊಡ್ಡಗೌಡರ ಉತ್ತರಾಧಿಕಾರಿಯಾಗಿದ್ದಾರೆ. ಇದರೊಂದಿಗೆ ದಳಪತಿಗಳು ಕ್ಷೇತ್ರದಲ್ಲಿ ಹಿಡಿತ ಸ್ಥಾಪಿಸಿದಂತಾಗಿದೆ.
ಪ್ರಜ್ವಲ್ ಗೆಲುವಿನಿಂದ ಪಕ್ಷದ ಪಾಲಿಗೆ ಸಂಘಟನಾ ಚತುರ, ಸಮರ್ಥ ಯುವ ನಾಯಕ ದೊರಕಿದಂತಾಗಿದೆ. ಭವಿಷ್ಯದಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆ ದೊರೆಯುವ ಸಾಧ್ಯತೆಯೂ ಹೆಚ್ಚಾಗಿದೆ.
ತಮ್ಮ ಪ್ರಚಾರದ ವೇಳೆ ಎಚ್.ಡಿ.ದೇವೇಗೌಡ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತ್ರವೇ ಪ್ರಸ್ತಾಪಿಸಿ ಮತಯಾಚಿಸಿ, ಮತದಾರರ ಒಲವು ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನೂ ಯುವಕರಾಗಿರುವ ಕಾರಣ ಕ್ರಿಯಾಶೀಲರಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಮಯವೂ ಇದೆ.
ರಾಜಕೀಯದಲ್ಲಿ ಮಹತ್ವಾಕಾಂಕ್ಷಿ ಹೊಂದಿರುವ ಯುವ ನಾಯಕನಿಗೆ ಹಿರಿಯರು ಅವಕಾಶ ನೀಡಿದರೆ ಪಕ್ಷದ ಸಂಘಟನೆಗೆ ಬಲ ತುಂಬುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಿದ್ಧರಿದ್ದಾರೆ. ತಂದೆ ಮತ್ತು ತಾತನ ಮಾರ್ಗದರ್ಶನದಲ್ಲಿ ಸಂಸದರಾಗಿ ಕಾರ್ಯ ನಿರ್ವಹಿಸುವರು.
ಈ ಚುನಾವಣೆ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ವಂಶ ರಾಜಕಾರಣದ ಇತಿಹಾಸದಲ್ಲಿ ದೇವೇಗೌಡರು ಕುಟುಂಬದ ಮೂರನೇ ತಲೆಮಾರು ಮೊದಲನೇ ತಲೆಮಾರಿನ ಜತೆ ಸ್ಪರ್ಧಿಸಿದ್ದು. ಮೊದಲನೇ ತಲೆಮಾರಿನ ದೇವೇಗೌಡರು ಏಳನೇ ಬಾರಿಗೆ ಸಂಸತ್ ಪ್ರವೇಶಿಸುವ ಕನಸು ನನಸಾಗಲಿಲ್ಲ. ಎರಡನೇ ತಲೆಮಾರಿನ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ, ಎಚ್.ಡಿ.ರೇವಣ್ಣ ಸಂಪುಟ ದರ್ಜೆ ಸಚಿವರು. ಮೂರನೇ ತಲೆಮಾರಿನ ಪ್ರಜ್ವಲ್ ಮೊದಲ ಬಾರಿಗೆ ಸಂಸತ್ ಪ್ರವೇಶದ ಕನಸು ನನಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.