ADVERTISEMENT

ಜೋಧಪುರ; ಗೆಹ್ಲೋಟ್‌ ಮತ್ತು ಮೋದಿಯದ್ದೇ ಹವಾ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 19:50 IST
Last Updated 28 ಏಪ್ರಿಲ್ 2019, 19:50 IST
ಅಶೋಕ್ ಗೆಹ್ಲೋಟ್ ಅವರು ತಮ್ಮ ಮಗನ ಪರವಾಗಿ ಜೋಧಪುರದ ಬೀದಿ–ಬೀದಿಗಳಲ್ಲಿ ತಿರುಗಿ ಮತ ಯಾಚಿಸಿದ್ದಾರೆ
ಅಶೋಕ್ ಗೆಹ್ಲೋಟ್ ಅವರು ತಮ್ಮ ಮಗನ ಪರವಾಗಿ ಜೋಧಪುರದ ಬೀದಿ–ಬೀದಿಗಳಲ್ಲಿ ತಿರುಗಿ ಮತ ಯಾಚಿಸಿದ್ದಾರೆ   

ಜೋಧಪುರ: ಲೋಕಸಭೆ ಚುನಾವಣೆಗಳಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ರಾಜಸ್ಥಾನದ ಜೋಧಪುರ ಕ್ಷೇತ್ರವೂ ಒಂದು. ನಾಲ್ಕನೇ ಹಂತದಲ್ಲಿ ಅಂದರೆ, ಏಪ್ರಿಲ್ 29ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಇಲ್ಲಿ ಕಾಂಗ್ರೆಸ್‌ನಿಂದ ವೈಭವ್ ಗೆಹ್ಲೋಟ್ ಮತ್ತು ಬಿಜೆಪಿಯಿಂದ ಗಜೇಂದ್ರ ಸಿಂಗ್ ಶೆಖಾವತ್ ಸ್ಪರ್ಧೆಗೆ ಇಳಿದಿದ್ದಾರೆ. ಇಬ್ಬರ ರಾಜಕೀಯ ಹಿನ್ನೆಲೆಯೂ ಪ್ರಭಾವಶಾಲಿಯಾದದ್ದು. ಆದರೆ ಈ ಇಬ್ಬರೂ ಈ ಚುನಾವಣೆಯಲ್ಲಿ ನಗಣ್ಯ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ವೈಭವ್ ಅವರು ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮಗ. ಅಶೋಕ್ ಗೆಹ್ಲೋಟ್ ಅವರು1980ರಿಂದ ಈ ಕ್ಷೇತ್ರದ ನಂಟು ಹೊಂದಿದ್ದಾರೆ. ಇದೇ ಕ್ಷೇತ್ರದಿಂದ ಐದು ಬಾರಿ ಸಂಸತ್ತಿಗೆ ಚುನಾಯಿತರಾಗಿದ್ದಾರೆ. ಈ ಕ್ಷೇತ್ರದೊಂದಿಗೆ ಅವರ ಒಡನಾಟ 40 ವರ್ಷಗಳದ್ದು. ಈಗ ಈ ಕ್ಷೇತ್ರದಲ್ಲಿ ಅವರ ಮಗ ಕಣಕ್ಕೆ ಇಳಿದಿದ್ದಾರೆ. ಮಗನನ್ನು ಗೆಲ್ಲಿಸಿಕೊಳ್ಳುವುದನ್ನು ಪ್ರತಿಷ್ಠೆಯನ್ನಾಗಿ ಆಶೋಕ್ ಗೆಹ್ಲೋಟ್ ಸ್ವೀಕರಿಸಿದ್ದಾರೆ. ಹೀಗಾಗಿ ಪ್ರಚಾರ ಅಂತ್ಯವಾಗುವವರೆಗೂ ಕ್ಷೇತ್ರದ ಬೀದಿ–ಬೀದಿಗಳಲ್ಲಿ ಓಡಾಡಿ ತಮ್ಮ ಮಗನನ್ನು ಗೆಲ್ಲಿಸಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ವೈಭವ್ ಪರವಾಗಿ ಅವರ ತಾಯಿ, ಹೆಂಡತಿ ಮತ್ತು ಮಗಳು ಸಹ ಪ್ರಚಾರಕ್ಕೆ ಇಳಿದಿದ್ದಾರೆ. ರಾಜ್ಯದ ಮತ್ತೊಬ್ಬ ಯುವ ನಾಯಕ ಸಚಿನ್ ಪೈಲಟ್ ಅವರು ವೈಭವ್ ಪರವಾಗಿ ಭಾರಿ ಪ್ರಚಾರ ನಡೆಸಿದ್ದಾರೆ. ಈಗ ಬಿಜೆಪಿಯ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಮರಳಿ ಪಡೆಯುವುದು ಕಾಂಗ್ರೆಸ್‌ ನಾಯಕರ ಗುರಿಯಾಗಿದೆ. ಹೀಗಾಗಿ ಎಲ್ಲಾ ಸ್ವರೂಪದ ತಂತ್ರಗಾರಿಕೆಗೆ ಅಶೋಕ್ ಗೆಹ್ಲೋಟ್ ಮೊರೆ ಹೋಗಿದ್ದಾರೆ. ದಲಿತರ ಸಮಾವೇಶವನ್ನೂ ನಡೆಸಿದ್ದಾರೆ.

ಮತ್ತೊಂದೆಡೆ ಬಿಜೆಪಿಯು ತಮ್ಮ ಅಭ್ಯರ್ಥಿಯಾಗಿ ಹಾಲಿ ಸಂಸದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಕಣಕ್ಕೆ ಇಳಿಸಿದೆ. 2014ರ ಚುನಾವಣೆಯಲ್ಲಿ ಶೆಖಾವತ್ ಅವರು ಕಾಂಗ್ರೆಸ್‌ ಅಭ್ಯರ್ಥಿಯ ಎದುರು 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಈ ಗೆಲುವು ಮೋದಿ ಅಲೆಯಿಂದ ದೊರೆತದ್ದು ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿಯೂ ಅವರು ಮೋದಿ ಮತ್ತು ರಾಷ್ಟ್ರೀಯತೆ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ.

ಶೆಖಾವತ್ ಪರವಾಗಿ ಬಿಜೆಪಿ ನಾಯಕರ ದಂಡೇ ಪ್ರಚಾರಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಜೋಧಪುರದಲ್ಲಿ ಬೃಹತ್ ಪ್ರಚಾರ ರ‍್ಯಾಲಿ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರ‍್ಯಾಲಿ ಮತ್ತು ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಹ ಶೆಖಾವತ್ ಪರವಾಗಿ ಪ್ರಚಾರ ನಡೆಸಿದ್ದಾರೆ. ಇಷ್ಟೆಲ್ಲಾ ಬಿಜೆಪಿ ನಾಯಕರು ಪ್ರಚಾರಕ್ಕೆ ಇಳಿದಿದ್ದರೂ ಅವರೆಲ್ಲಾ ‘ಮೋದಿಗಾಗಿ ಮತ ನೀಡಿ’ ಎಂದೇ ಕೇಳಿದ್ದಾರೆ.

ಹೀಗಾಗಿಯೇ ಇಲ್ಲಿನ ಜನ ಈ ಸ್ಪರ್ಧೆ ನರೇಂದ್ರ ಮೋದಿ ಮತ್ತು ಅಶೋಕ್ ಗೆಹ್ಲೋಟ್ ಮಧ್ಯೆ ನಡೆಯುತ್ತಿರುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ.

ಅಭಿವೃದ್ಧಿ ಅಥವಾ ಭದ್ರತೆ

* 1952ರಿಂದ 2014ರವರೆಗೆ ಈ ಕ್ಷೇತ್ರವು 16 ಚುನಾವಣೆಗಳನ್ನು ಎದುರಿಸಿದೆ. ಅದರಲ್ಲಿ ಕಾಂಗ್ರೆಸ್‌ 8 ಭಾರಿ ಜಯಗಳಿಸಿದೆ. ಜನತಾ ಪಕ್ಷ ಒಮ್ಮೆ ಮತ್ತು ಬಿಜೆಪಿ ನಾಲ್ಕು ಭಾರಿ ಜಯಗಳಿಸಿದೆ. ಸ್ವತಂತ್ರ ಅಭ್ಯರ್ಥಿಗಳು ಮೂರು ಬಾರಿ ಜಯ ದಾಖಲಿಸಿದ್ದಾರೆ

* ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಆದರೆ ಬಿಜೆಪಿಯ ಜಸ್ವಂತ್ ಸಿಂಗ್ ಮೂರು ಭಾರಿ ಇಲ್ಲಿ ಗೆದ್ದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ 25 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಅದು ಸಾಧ್ಯವಾಗಿದ್ದು ಮೋದಿ ಅಲೆಯಿಂದ, ಈ ಕ್ಷೇತ್ರದಲ್ಲೂ ಮೋದಿ ಅಲೆ ಕೆಲಸ ಮಾಡಿತ್ತು ಎಂದು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಈ ಭಾರಿಯೂ ಮೋದಿ ಅಲೆ ಕೆಲಸ ಮಾಡುವ ನಿರೀಕ್ಷೆಯಲ್ಲಿ ಶೆಖಾವತ್ ಇದ್ದಾರೆ

* ‘ನನ್ನ ತಂದೆ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ನಾನೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಹೀಗಾಗಿ ನನಗೂ ಒಂದು ಅವಕಾಶ ನೀಡಿ’ ಎಂಬುದು ವೈಭವ್ ಗೆಹ್ಲೋಟ್ ಅವರ ಮನವಿ

* ‘ವೈಭವ್ ಅವರ ತಂದೆ ರಾಜ್ಯದ ಮುಖ್ಯಮಂತ್ರಿ. ವೈಭವ್ ಅವರನ್ನು ಗೆಲ್ಲಿಸಿದರೆ, ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗಲಿದೆ’ ಎಂದು ಮತದಾರರು ಲೆಕ್ಕ ಹಾಕಿದ್ದಾರೆ. ‘ಮೋದಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ದೇಶದ ಭದ್ರತೆಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇರೆ ನಾಯಕರಿಂದ ಸಾಧ್ಯವಿರಲಿಲ್ಲ’ ಎಂದೂ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಮತದಾರರು ಕ್ಷೇತ್ರದ ಅಭಿವೃದ್ಧಿ ಅಥವಾ ದೇಶದ ಭದ್ರತೆಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಎರಡು ಅಂಶಗಳು ಇಲ್ಲಿನ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ

2014ರ ಚುನಾವಣೆ

7.13 ಲಕ್ಷ: ಬಿಜೆಪಿಯ ಗಜೇಂದ್ರ ಸಿಂಗ್ ಶೆಖಾವತ್ ಪಡೆದ ಮತಗಳು

3.03 ಲಕ್ಷ: ಕಾಂಗ್ರೆಸ್‌ನ ಚಂದ್ರೇಶ್ ಕುಮಾರಿ ಕಟೋಚ್‌ ಪಡೆದ ಮತಗಳು

4.10 ಲಕ್ಷ: ಶೆಖಾವತ್ ಅವರ ಗೆಲುವಿನ ಅಂತರ

ಮತಪ್ರಮಾಣ

ಬಿಜೆಪಿ – 66.08 %

ಕಾಂಗ್ರೆಸ್‌ – 28.10 %

ಬಿಎಸ್‌ಪಿ – 1.25 %

ಇತರರು – 3.17 %

ನೋಟಾ – 1.40 %

20 ಲಕ್ಷ: ಈ ಬಾರಿಯ ಮತದಾರರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.