ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಲಭಿಸಿರುವ ‘ಕಹಳೆ ಊದುವ ವ್ಯಕ್ತಿ’ಯ ಚಿಹ್ನೆ ಚುನಾವಣಾ ಆಯೋಗದ ‘ಸ್ವೀಪ್’ (ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ) ಲಾಂಛನದಲ್ಲೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.
ಆಯೋಗ ರೂಪಿಸಿರುವ ಲಾಂಛನ ಮತ್ತು ಸಂದೇಶವನ್ನು ರಾಜ್ಯ ಚುನಾವಣಾ ಆಯೋಗ ಯಥಾವತ್ತಾಗಿ ಕನ್ನಡೀಕರಿಸಿದೆ. ಅದರಲ್ಲಿ ಕಹಳೆ ಊದುವ ವ್ಯಕ್ತಿಯ ಚಿತ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ‘ದೇಶ್ ಕಾ ತ್ಯೋಹಾರ್’ ಎಂಬ ಹಿಂದಿ ಸಂದೇಶವನ್ನು ರಾಜ್ಯ ಚುನಾವಣಾ ಆಯೋಗ ‘ದೇಶದ ಮಹಾ ಉತ್ಸವ’ ಎಂದು ಕನ್ನಡಕ್ಕೆ ಅನುವಾದಿಸಿದೆ.
ಸುಮಲತಾ ಅವರು ಕಹಳೆ ಊದುವ ವ್ಯಕ್ತಿ ಸೇರಿ ತೆಂಗಿನ ತೋಟ ಹಾಗೂ ಕಬ್ಬಿನ ಜಲ್ಲೆಯ ಚಿಹ್ನೆಗಳಿಗಾಗಿ ಅರ್ಜಿ ಸಲ್ಲಿದ್ದರು. ಈ ಮೂರು ಆಯ್ಕೆಗಳಲ್ಲಿ ಚುನಾವಣಾ ಆಯೋಗ ಕಹಳೆ ಊದುವ ವ್ಯಕ್ತಿ ಚಿಹ್ನೆಯನ್ನು ಅವರಿಗೆ ನೀಡಿದೆ. ಆದರೆ, ಚಿಹ್ನೆ ನೀಡುವ ಮೊದಲು ಆಯೋಗ ತನ್ನ ಸ್ವೀಪ್ ಚಟುವಟಿಕೆಯ ಲಾಂಛನ ಗಮನಿಸದೆ ಇರುವುದು ಈಗ ಗೊಂದಲಕ್ಕೆ ಕಾರಣವಾಗಿದೆ.
‘ಈ ವಿಷಯ ಬುಧವಾರವಷ್ಟೇ ತಿಳಿಯಿತು. ನಮಗೂ ಅಚ್ಚರಿಯಾಗಿದೆ. ಕಣ್ತಪ್ಪಿನಿಂದ ಆಗಿರಬಹುದು. ಸ್ವೀಪ್ ಚಟುವಟಿಕೆ ಉಸ್ತುವಾರಿ ಹೊತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಮಾತನಾಡಿದ್ದೇನೆ. ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು. ಜಿಲ್ಲೆಯಾದ್ಯಂತ ಪ್ರದರ್ಶನ ಮಾಡಿರುವ ಕಟೌಟ್, ಬ್ಯಾನರ್, ಬಂಟಿಂಗ್ಸ್, ಕರಪತ್ರಗಳ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು. ರಾತ್ರಿಯೇ ಎಲ್ಲವನ್ನು ತೆರವುಗೊಳಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.
ವ್ಯರ್ಥವಾದ ಪ್ರಚಾರ ಸಾಮಗ್ರಿ: ಕರಪತ್ರ, ಕಟೌಟ್ ಸೇರಿ ಪ್ರತಿ ಪ್ರಚಾರ ಸಾಮಗ್ರಿಯ ಮೇಲೆ ಲಾಂಛನ ಇದೆ. ಮತದಾರರ ಜಾಗೃತಿಗೆ ವಾರ್ತಾ ಇಲಾಖೆಯು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ. ಎಲ್ಲಾ ಚಿತ್ರಗಳಲ್ಲಿ ಕಹಳೆ ಊದುವ ವ್ಯಕ್ತಿಯ ಚಿತ್ರವಿದೆ. ಈಗ ಎಲ್ಲವನ್ನು ತೆರವುಗೊಳಿಸುತ್ತಿರುವುದರಿಂದ ಹಣ ವ್ಯರ್ಥವಾಗಿದೆ.
‘ಸ್ವೀಪ್ ಚಟುವಟಿಕೆ ನಿಲ್ಲುವುದಿಲ್ಲ. ಹಳೆಯ ಪ್ರಚಾರ ಸಾಮಗ್ರಿ ತೆರವುಗೊಳಿಸಿ ಹೊಸ ವಸ್ತುಗಳನ್ನು ಮುದ್ರಿಸಲಾಗುವುದು’ ಎಂದು ಜಿ.ಪಂ ಸಿಇಒ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.