ADVERTISEMENT

ಬನ್ನಿ ಮತ ಚಲಾಯಿಸೋಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST
ನಿಮ್ಮ ಮತ.. ನಿಮ್ಮ ಭವಿಷ್ಯ.... ಮತದಾನ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತದ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್‍ ಅವರು ಬುಧವಾರ ಪುರಿಯ ಕಡಲ ತೀರದಲ್ಲಿ ರಚಿಸಿದ ಮರಳಿನ ಕಲಾಕೃತಿಯಿದು. -ರಾಯಿಟರ್ಸ್ ಚಿತ್ರ.
ನಿಮ್ಮ ಮತ.. ನಿಮ್ಮ ಭವಿಷ್ಯ.... ಮತದಾನ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತದ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್‍ ಅವರು ಬುಧವಾರ ಪುರಿಯ ಕಡಲ ತೀರದಲ್ಲಿ ರಚಿಸಿದ ಮರಳಿನ ಕಲಾಕೃತಿಯಿದು. -ರಾಯಿಟರ್ಸ್ ಚಿತ್ರ.   

ಇಂದು ನಿರ್ಧಾರದ ದಿನ. ಮುಂದಿನ ಐದು ವರ್ಷಗಳ ಕಾಲ ಈ ದೇಶದಲ್ಲಿ ಯಾರು ಆಡಳಿತ ಮಾಡಬೇಕು ಎಂಬುದನ್ನು ತೀರ್ಮಾನಿಸುವ ದಿನ. ಅದನ್ನು ನಿರ್ಧರಿಸುವುದು ಒಂದು ಗಳಿಗೆ. ಆ ಗಳಿಗೆಯಲ್ಲಿಯೇ ನಾವು ಮತಗಟ್ಟೆಯ ಮುಂದೆ ನಿಲ್ಲಬೇಕು; ನಮ್ಮ ಎಡಗೈ ಹೆಬ್ಬೆರಳ ಮೇಲೆ ಮತ ಚಲಾಯಿಸಿದ್ದಕ್ಕಾಗಿ ಗುರುತನ್ನು ಹಾಕಿಸಿಕೊಳ್ಳಬೇಕು. ನಂತರ ಮತಯಂತ್ರದ ಮುಂದೆ ನಿಂತು ನಮಗೆ ಬೇಕಾದ ಪಕ್ಷಕ್ಕೆ, ಅಭ್ಯರ್ಥಿಗೆ ಮತ ಹಾಕಬೇಕು.

ಮತ ಚಲಾಯಿಸುವುದು ನಮಗೆ ಸಂವಿಧಾನ ನೀಡಿದ ಪರಮ ಹಕ್ಕು. ನಾವು ಬಡವರೇ ಇರಬಹುದು, ಶ್ರೀಮಂತರೇ ಇರಬಹುದು. ಎಲ್ಲರಿಗೂ ಒಂದೇ ಮತ. ಪ್ರಜಾತಂತ್ರದ ವೈಭವ ಎಂದರೆ ಅದು. ಇಲ್ಲಿ ಎಲ್ಲರೂ ಸಮಾನರು. ಯಾವ ಅಳುಕು, ಅಂಜಿಕೆ ಇಲ್ಲದೆ ನಮ್ಮ ಮತವನ್ನು ಚಲಾಯಿಸಬೇಕು. ಆ ಪವಿತ್ರ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು.

ಭಾರತದ ಪ್ರಜಾಪ್ರಭುತ್ವದ ಶಕ್ತಿ ಮತ್ತು ದೌರ್ಬಲ್ಯಗಳಿಗೆ ರೂಪಕವಾಗುವಂಥ ಎರಡು ಕ್ಷಣಗಳು ಎಲ್ಲಾ ಭಾರತೀಯರ ಬದುಕಿನಲ್ಲೂ ಇವೆ. ದೇಶದಲ್ಲಿ ಯಾರು ಆಡಳಿತ ಮಾಡಬೇಕು ಎಂದು ನಿರ್ಧರಿಸುವುದಕ್ಕಾಗಿ ಮತಗಟ್ಟೆಗೆ ಹೋಗುವುದು ವ್ಯಕ್ತಿಯ ಸಬಲತೆಯ ರೂಪಕವಾಗಿದ್ದರೆ ಅರ್ಜಿ ಹಿಡಿದುಕೊಂಡು ಸರ್ಕಾರಿ ಕಚೇರಿಯೊಂದರಲ್ಲಿ ಕಾಯುವುದು ಪ್ರಭುತ್ವದ ಎದುರು ವ್ಯಕ್ತಿ ದುರ್ಬಲನಾಗಿಬಿಡುವುದರ ರೂಪಕ.

ಈ ಎರಡಕ್ಕೂ ಸಂಬಂಧವಿದೆ. ಸಬಲ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ದುರ್ಬಲ ಕ್ಷಣದ ತೀವ್ರತೆಯನ್ನು ನಿರ್ಧರಿಸುತ್ತದೆ. ಈ ಸತ್ಯವನ್ನು ಅರಿತವರ ಸಂಖ್ಯೆ ಕಳೆದ ಹದಿನೈದು ಚುನಾವಣೆಗಳಲ್ಲಿಯೂ ಹೆಚ್ಚು ಕಡಿಮೆ ಅಷ್ಟೇ ಇದೆ. 1952ರ ಮೊದಲ ಮಹಾ ಚುನಾವಣೆಗಳಲ್ಲಿ ಮತ ಚಲಾವಣೆಯ ಪ್ರಮಾಣ ಶೇಕಡಾ 45.7ರಷ್ಟಿತ್ತು. ಎರಡನೇ ಮಹಾಚುನಾವಣೆಯ ವೇಳೆಗೆ ಇದು ಶೇಕಡಾ 55ಕ್ಕೆ ಏರಿತು. ಆಮೇಲಿನ ಐದೂವರೆ ದಶಕಗಳ ಅವಧಿಯಲ್ಲಿ ಆದ ಸರಾಸರಿ ಹೆಚ್ಚಳ ಕೇವಲ ಶೇಕಡಾ ಆರರ ಆಸುಪಾಸಿನಲ್ಲಷ್ಟೇ ಇದೆ. ಅಂದರೆ ಯಾರು ಆಡಳಿತ ನಡೆಸಬೇಕು ಎಂದು ನಿರ್ಧರಿಸಬೇಕಾದವರಲ್ಲಿ ದೊಡ್ಡ­ದೊಂದು ವರ್ಗ ತನ್ನ ಅಭಿಪ್ರಾಯವನ್ನೇ ತಿಳಿಸುತ್ತಿಲ್ಲ.

ಹದಿನೈದು ಮಹಾ ಚುನಾವಣೆಗಳ ಅವಧಿಯಲ್ಲಿ ಬಹ­ಳಷ್ಟು ಬದಲಾ­ವಣೆ­ಗಳು ಸಂಭವಿಸಿವೆ. ಈಗ ಸರ್ವವ್ಯಾಪಿಯಾದ ಮಾಧ್ಯ­ಮ­ಗಳಿವೆ. ಸಾಕ್ಷರತೆಯ ಪ್ರಮಾಣ ಮೊದಲ ಎರಡು ಮಹಾ­ಚುನಾವ­ಣೆಗಳ ಕಾಲಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿದೆ. ಆದರೆ ಮತದಾನದ ಪ್ರಮಾಣ ಮಾತ್ರ ಇದಕ್ಕೆ ಅನುಗುಣವಾಗಿ ಹೆಚ್ಚಾಗಿಲ್ಲ. ಅತಿ ಹೆಚ್ಚು ಸಂಖ್ಯೆಯ ವಿದ್ಯಾವಂತರಿರುವ ನಗರ ಪ್ರದೇಶ­ಗಳಲ್ಲೇ ಮತದಾನದ ಪ್ರಮಾಣ ಆತಂಕ ಹುಟ್ಟಿಸುವಷ್ಟು ಕಡಿಮೆ ಇದೆ. ಅರಿವುಳ್ಳ ಮತದಾರರ ಈ ನಿರ್ಲಿಪ್ತಭಾವ ಪ್ರಜಾಸ­ತ್ತಾತ್ಮಕ ಸಂಸ್ಥೆ­ಗಳನ್ನು ದುರ್ಬಲವಾಗಿಸುತ್ತಿವೆ. ಅದು ಅಧಿಕಾರದೆ­ದುರು ಸಾಮಾನ್ಯ ನಾಗರಿಕ ದುರ್ಬಲನಾಗುವ ಕ್ಷಣಗಳ ತೀವ್ರತೆಯನ್ನು ಹೆಚ್ಚಿಸುತ್ತಿದೆ.

ಇಲ್ಲಿಯ ತನಕ ಮತದಾನ ಮಾಡದೇ ಇರುವುದಕ್ಕೆ ನೂರೆಂಟು ನೆಪಗಳಿದ್ದವು. ಎಲ್ಲದಕ್ಕಿಂತಲೂ ಮುಖ್ಯವಾದದ್ದು ಯಾವ ಅಭ್ಯ­ರ್ಥಿಯೂ ಆಯ್ಕೆಗೆ ಅರ್ಹನಲ್ಲ ಎಂಬುದು. ಇದಕ್ಕೀಗ ಚುನಾವಣಾ ಆಯೋಗ NOTA ಎಂಬ ಪರಿಹಾರ ನೀಡಿದೆ.  ಈ ಮೂಲಕ ಅಭ್ಯರ್ಥಿಗಳಲ್ಲಿ ಯಾರೂ ಅರ್ಹರಲ್ಲ ಎಂದು ಸೂಚಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಈಗ ಪರ್ಯಾಯ ರಾಜಕಾರಣದ ಹೊಸ ಅಲೆಯೊಂದು ಎದ್ದಿದೆ. ಇದು ಸಾಂಪ್ರದಾಯಿಕ ಚುನಾವಣಾ ರಾಜಕಾರಣದ ವ್ಯಾಕರಣವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದೆ.

ಮುಖ್ಯವಾಹಿನಿಯ ಪಕ್ಷಗಳು ಸ್ವಲ್ಪ ಮಟ್ಟಿಗಾದರೂ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿ­ಯಾ­ಗಿದೆ. ಈ ಎಲ್ಲವೂ ಪ್ರತಿಯೊಬ್ಬ ವಯಸ್ಕ ಭಾರತೀಯನೂ ಮತಗಟ್ಟೆಗೆ ಹೋಗುವುದಕ್ಕೆ ಹೊಸ ಕಾರಣಗಳನ್ನು ಸೃಷ್ಟಿಸುತ್ತಿವೆ. ನನ್ನ ಆಯ್ಕೆಯ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯೇ ಇಲ್ಲ. ಆದ್ದರಿಂದ ನಾನು ಮತ ಚಲಾಯಿಸುವ ಅಗತ್ಯವಿಲ್ಲ ಎಂದು ಯಾರೂ ಭಾವಿಸ­ಬಾರದು. ಪ್ರಜಾಪ್ರಭುತ್ವ ಯಶಸ್ಸಿಗೆ ಬೇಕಿರುವುದು ಪ್ರಜೆಗಳ ಪಾಲ್ಗೊ­ಳ್ಳುವಿಕೆ.

ಈ ಪಾಲ್ಗೊಳ್ಳುವಿಕೆಯ ಅಭಿವ್ಯಕ್ತಿಯೇ ಮತ ಚಲಾವಣೆ. ಮತದಾರರಾದ ನಾವು ಅರಿಯಬೇಕಾದ ಬಹುದೊಡ್ಡ ಸತ್ಯವೆಂದರೆ ಪ್ರಜಾಪ್ರಭುತ್ವದಲ್ಲಿ ನಿರ್ದಿಷ್ಟ ಅಭ್ಯರ್ಥಿಯ ‘ಗೆಲುವು’ ಮಾತ್ರ ಮತದಾರನ ತೀರ್ಪಲ್ಲ. ಪ್ರತೀ ಮತವೂ ಒಂದು ತೀರ್ಪು. ಈ ತೀರ್ಪನ್ನು ದಾಖಲಿಸುವ ಅವಕಾಶವನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಮತಗಟ್ಟೆಗೆ ತೆರಳಿ ನಮ್ಮ ತೀರ್ಪನ್ನು ದಾಖಲಿಸೋಣ. ಬನ್ನಿ ಧೈರ್ಯವಾಗಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.