ನವದೆಹಲಿ (ಪಿಟಿಐ): ಚುನಾವಣಾ ಪ್ರಚಾರದ ವೇಳೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ `ಅವಹೇಳನಕಾರಿ' ಪದ ಬಳಸಿ ಟೀಕೆ ಮಾಡಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣಾ ಆಯೋಗವು ಗುರುವಾರ ಎಚ್ಚರಿಕೆ ನೀಡಿದೆ.
ಇದೇ ವೇಳೆ ಮೋದಿ ವಿರುದ್ಧದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿದ್ದರಾಮಯ್ಯ ಅವರು ನೀಡಿದ ವಿವರಣೆಯನ್ನು ತಿರಸ್ಕರಿಸಿದ ಆಯೋಗವು ಭವಿಷ್ಯದಲ್ಲಿ `ಅತ್ಯಂತ ಎಚ್ಚರಿಕೆ'ಯಿಂದ ಇರುವಂತೆ ತಿಳಿಸಿದೆ.
`ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರ ವಿರುದ್ಧ ಬಳಸಿರುವ ಪದ ಕುರಿತಂತೆ ನೀವು ಆಯೋಗಕ್ಕೆ ನೀಡಿದ ವಿವರಣೆಯನ್ನು ಒಪ್ಪಲಾಗದು' ಎಂದು ಆಯೋಗ ಹೇಳಿದೆ.
ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರನ್ನು `ನರಹಂತಕ' ಎಂದು ಕರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.