ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನೆರವಾಗಿದ್ದ ಚುನಾವಣಾ ತಜ್ಞ ಸುನೀಲ್ ಕನುಗೋಲು ಅವರನ್ನು ಕಾಂಗ್ರೆಸ್ ಈಗ ಮಧ್ಯಪ್ರದೇಶಕ್ಕೆ ನಿಯೋಜಿಸಿದೆ. ಅಲ್ಲಿಯೂ ಇದೇ ಮಾದರಿಯ ಫಲಿತಾಂಶ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಮೇ ತಿಂಗಳಲ್ಲಿ ಕನುಗೋಲು ಅವರನ್ನು ಕರ್ನಾಟಕಕ್ಕೆ ನಿಯೋಜಿಸಲಾಗಿತ್ತು. ಅಂದಿನಿಂದ ಅವರು ಪಕ್ಷದ ಚುನಾವಣಾ ತಂತ್ರಗಾರಿಕೆ ರೂಪಿಸಲು ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಸಮೀಕ್ಷೆಗಳನ್ನು ಮಾಡುವುದು, ಪ್ರಚಾರ ರೂಪು ರೇಷೆ ಸಿದ್ಧಪಡಿಸುವುದು, ಅಭ್ಯರ್ಥಿಗಳನ್ನು ನಿರ್ಧರಿಸುವುದೂ ಸೇರಿದಂತೆ ಪ್ರಮುಖ ಹೊಣೆಗಾರಿಕೆಗಳನ್ನು ಅವರು ನಿಭಾಯಿಸಿದ್ದಾರೆ. ಅಲ್ಲದೇ, ಪಕ್ಷವನ್ನು ಕರ್ನಾಟಕದಲ್ಲಿ ಗೆಲ್ಲಿಸುವ ಕಾರ್ಯತಂತ್ರದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಚುನಾವಣೆಯ ಗೆಲವಿನಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಬಹುತೇಕ ತೆರೆಮರೆಯಲ್ಲೇ ಕಾರ್ಯ ನಿರ್ವಹಿಸುವ ಕನುಗೋಲು ಕರ್ನಾಟಕದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ತಂತ್ರಗಾರಿಗೆ ರೂಪಿಸಿದ್ದರು ಎಂದು ಹೇಳಲಾಗಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರಯೋಗಿಸಿದ್ದ ‘ರೇಟ್ ಕಾರ್ಡ್‘, ‘ಪೇ-ಸಿಎಂ’, ‘40 ಪರ್ಸೆಂಟ್ ಕಮಿಷನ್ ಸರ್ಕಾರ’ ‘ಕ್ರೈಪಿಎಂ’ ಅಸ್ತ್ರಗಳ ಮಾಸ್ಟ್ರರ್ ಮೈಂಡ್ ಸುನಿಲ್ ಕನುಗೋಲು ಎಂಬ ಮಾತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಚುನಾವಣಾ ಕಾರ್ಯತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರ ತಂಡದಲ್ಲಿದ್ದ ಸುನಿಲ್ ಕನುಗೋಲು, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಗೆ ದುಡಿದಿದ್ದರು. ಈಗ ಕಾಂಗ್ರೆಸ್ ಪರವಾಗಿ ಅವರು ಕೆಲಸ ಮಾಡುತ್ತಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನದೊಂದಿಗೆ, ಮಧ್ಯಪ್ರದೇಶದಲ್ಲಿಯೂ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಸದ್ಯ ಕನುಗೋಲು ನೆರವು ಪಡೆಯಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.