ಕುಮಟಾ: ‘ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಿ ಬೀಳುತ್ತದೆ, ಅದಕ್ಕಾಗಿ ಬೇಕಾದ ಏಕನಾಥ ಶಿಂಧೆ, ಅಜಿತ್ ಪವಾರ್ ಮುಂತಾದವರ ಪಾತ್ರಗಳು ಆಗಲೇ ಸಿದ್ಧವಾಗಿವೆ‘ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಕುಮಟಾದಲ್ಲಿ ಗುರುವಾರ ನಡೆದ ಬಿಜೆಪಿ ಬೂತ್ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ` ಹತ್ತು ವರ್ಷಗಳ ನರೇಂದ್ರ ಮೋದಿ ಸರ್ಕಾರ ಕೇವಲ ಟ್ರೈಲರ್ ಅಷ್ಟೇ, ಪಿಕ್ಚರ್ ಇನ್ನೂ ಬಾಕಿ ಇದೆ. ಸಮಾನ ನಾಗರಿಕ ಸಂಹಿತೆಯನ್ನು ಮುಂದೆ ದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿ ತರಲಾಗುತ್ತದೆ’ ಎಂದರು.
` ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಂಥರಾ ಗಾಂಧಿ ಇದ್ದ ಹಾಗೆ, ನಾವು ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್ ಇದ್ದಹಾಗೆ. ಕಾಗೇರಿ ಅವರ ಮಾತುಗಳು ಇನ್ನಷ್ಟು ಖಡಕ್ ಆಗಬೇಕು. ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್‌ನವರು ದೆಹಲಿಯಲ್ಲಿ ಒಂದು ಎಕರೆ ಜಾಗ ನೀಡಿಲ್ಲ. ಕುಮಟಾದಲ್ಲಿ ಆಗಬೇಕಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರೊಂದಿಗೆ ನಾನೂ ಹೋರಾಟಕ್ಕೆ ಬರುತ್ತೇನೆ’ ಎಂದು ಹೇಳಿದರು.
ಕೆನರಾ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಜನರಲ್ಲಿ ಈ ಸಲ ಮೋದಿ ಅವರನ್ನು ಪ್ರಧಾನಿಯಾಗಿಸುವ ಹಠ, ಛಲ ಮೂಡಿದೆ. ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ನೂರು ಅಭ್ಯರ್ಥಿಗಳಿಲ್ಲ, ಇನ್ನು ಅವರು ಗ್ಯಾರಂಟಿ ಹೇಗೆ ಕೊಡುತ್ತಾರೆ? ಎಂದ ಅವರು, ಕುಮಟಾದಲ್ಲಿ ಶಾಸಕರ ನೇತೃತ್ವದ ಸಂಘಟನೆ, ಜೆಡಿಎಸ್ ಮುಖಂಡ ಸೂರಜ್ ನಾಯ್ಕರ ಬೆಂಬಲದಿಂದ ಹೆಚ್ಚಿನ ಮತ ಬೀಳಲಿದೆ. ಬಿ.ಜೆ.ಪಿ-ಜೆಡಿಎಸ್ ಮೈತ್ರಿ ಹೊಸದೇನೂ ಅಲ್ಲ, ಎರಡು ಪಕ್ಷಗಳ ಸಂಸಾರ ಸರಿಯಾಗಿದ್ದರೆ ನಮ್ಮನ್ನು ತಡೆಯಾಗುತ್ತಿರಲಿಲ್ಲ. ಜೆಡಿಎಸ್- ಬಿಜೆಪಿ ಹಾಲು-ಸಕ್ಕರೆಯಾಗಲು ಏನೇನು ಬೇಕೋ ಅವೆಲ್ಲ ಮಾಡೋಣ’ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಘಟಕದ ಉಪಧ್ಯಕ್ಷೆ ರೂಪಾಲಿ ನಾಯ್ಕ, ` ಹಿಂದೆ ಮಾಜಿ ಸಂಸದ ಅನಂತಕುಮಾರ ಹೆಗಡೆ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂತರದಿಂದ ಆಯ್ಕೆಯಾಗಿದ್ದರು. ಅದೇ ಪರಂಪರೆ ಮುಂದುವರಿಯಲಿದೆ’ ಎಂದರು.
ಜೆಡಿ(ಎಸ್) ಮುಖಂಡ ಸೂರಜ್ ನಾಯ್ಕ, `ಎರಡೂ ಪಕ್ಷದವರು ಸೇರಿ ಈಗ ಕೆಲಸ ಮಾಡಿದರೆ ಬಿಜೆಪಿಗೆ ಕುಮಟಾ ಕ್ಷೇತ್ರದಿಂದ 1.20 ಲಕ್ಷ ಮತಗಳನ್ನು ಕೊಡಲು ಸಾಧ್ಯವಿದೆ’ ಎಂದು ಹೇಳಿದರು.
ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ, ಮುಖಂಡ ಕೆ.ಜಿ.ನಾಯ್ಕ, ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಐ.ಹೆಗಡೆ, ಜಿ.ಜಿ.ಹೆಗಡೆ, ಪ್ರಶಾಂತ ನಾಯ್ಕ, ಎಂ.ಜಿ.ಭಟ್ಟ, ಚಿದಾನಂದ ಭಂಡಾರಿ, ನಾಗರಾಜ ನಾಯಕ, ಗೋವಿಂದ ನಾಯ್ಕ, ವೆಂಕಟೇಶ ನಾಯಕ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.