ಬೆಂಗಳೂರು: ದೇಶದ ಭೌಗೋಳಿಕ ವಿಚಾರದಲ್ಲಿ ಪ್ರಮುಖವಾಗಿರುವ ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಗಾಗಿ ಕರ್ನಾಟಕದಲ್ಲಿದ್ದಾರೆ. ಇಲ್ಲಿ ಚುನಾವಣೆ ಎದುರಿಸಲು ಬಿಜೆಪಿಗೆ ಸ್ಥಳೀಯ ನಾಯಕರಿಲ್ಲವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಪ್ರಶ್ನಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರ ಹಿಂಸಾಚಾರದಿಂದ ನಲುಗಿದೆ. ಅಲ್ಲಿನ ರಾಜ್ಯಪಾಲರು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನಿ ರಾಜಧಾನಿ ಬಿಟ್ಟು ಬರಲು ಸಾಧ್ಯವೆ? ಎಂದು ಕೇಳಿದರು.
ಪ್ರಧಾನಿಯವರು ಬೆಂಗಳೂರಿನಲ್ಲಿ ಒಂಬತ್ತು ಗಂಟೆಗಳ ರೋಡ್ ಶೋ ಹಮ್ಮಿಕೊಂಡಿದ್ದಾರೆ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಆಗಲಿದೆ. ರೋಗಿಗಳೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಜನರು ಬಿಜೆ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಖಚಿತ ಎಂದು ಹೇಳಿದರು.
ಬಿಜೆಪಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಸುಳ್ಳು ಜಾಹೀರಾತುಗಳನ್ನು ಪ್ರಕಟಿಸುತ್ತಿದೆ. ಬಿಜೆಪಿಯು ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸುತ್ತಿದೆ. ಚುನಾವಣಾ ಆಯೋಗವು ಈ ಜಾಹೀರಾತುಗಳಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.