ADVERTISEMENT

ಈಶ್ವರಪ್ಪ ಮಾತುಗಳಿಗೆ ಸಿಟ್ಟಾದ ಅಮಿತ್ ಶಾ

ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬ ಹೇಳಿಕೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 22:30 IST
Last Updated 4 ಏಪ್ರಿಲ್ 2024, 22:30 IST
ಅಮಿತ್ ಶಾ
ಅಮಿತ್ ಶಾ   

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ದೆಹಲಿಗೆ ಕರೆಯಿಸಿಕೊಂಡರೂ ಭೇಟಿಗೆ ಅವಕಾಶವನ್ನೇ ಕೊಡದೇ ವಾಪಸ್‌ ಕಳುಹಿಸಿರುವುದಕ್ಕೆ ಏನು ಕಾರಣ ಎಂಬ ಚರ್ಚೆ ಬಿಜೆಪಿಯಲ್ಲಿ ಗಹನವಾಗಿ ನಡೆದಿದೆ.

ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು, ಈಶ್ವರಪ್ಪ ಅವರಿಗೆ ಕರೆ ಮಾಡಿ ಬುಧವಾರ ದೆಹಲಿಗೆ ಬರುವಂತೆ ತಿಳಿಸಿದ್ದರು. ಅದರಂತೆ, ರಾತ್ರಿ 8ರ ಸುಮಾರಿಗೆ ಈಶ್ವರಪ್ಪ ದೆಹಲಿ ತಲುಪಿದ್ದರು. ಅಮಿತ್ ಶಾ ಮನೆಗೆ ಕರೆ ಮಾಡಿದಾಗ, ‘ಭೇಟಿಯ ಅಗತ್ಯವಿಲ್ಲ’ ಎಂದು ಸಂದೇಶ ಬಂದಿದ್ದರಿಂದ, ಈಶ್ವರಪ್ಪ ವಾಪಸ್ ಆದರು.

ಶಾ ಅವರ ಬೇಸರ ಮತ್ತು ಕೋಪಕ್ಕೆ ಮುಖ್ಯ ಕಾರಣ, ತಾವು ದೆಹಲಿಗೆ ಬಂದು ಭೇಟಿ ಮಾಡಲು ತಿಳಿಸಿದ ವಿಚಾರವನ್ನು ಮರುಕ್ಷಣವೇ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಮಾಡಿದ್ದು ಅಲ್ಲದೇ, ಯಾವುದೇ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

‘ಯಡಿಯೂರಪ್ಪ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದು, ಇದಕ್ಕೆ ಮೋದಿ ಮತ್ತು ಶಾ ಅವರ ಬೆಂಬಲ ಸಿಗಲಿದೆ. ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದೂ ಈಶ್ವರಪ್ಪ ಹೇಳಿದ್ದರು. ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿ ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡಲು ಅಮಿತ್‌ ಶಾ ಬಯಸಿದ್ದರು. ಆದರೆ, ತಾವು ವಿಶ್ವಾಸದಿಂದ ನೀಡಿದ ಆಹ್ವಾನವನ್ನು ಅತ್ಯಂತ ಲಘುವಾಗಿ ಪರಿಗಣಿಸಿ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ, ಇನ್ನೆಂದಿಗೂ ಅವರನ್ನು ಭೇಟಿ ಮಾಡುವುದಿಲ್ಲ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ

ದೆಹಲಿಯಿಂದ ವಾಪಸಾದ ಈಶ್ವರಪ್ಪ ಅವರು,‘ಅಮಿತ್‌ ಶಾ ಅವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಿಂತು ಯಡಿಯೂರಪ್ಪ ಅವರ ಮಗನನ್ನು ಸೋಲಿಸಲಿ ಎಂಬುದು ಶಾ ಅವರ ಅಪೇಕ್ಷೆ ಇರಬೇಕು’ ಎಂದು ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.