ಬೆಂಗಳೂರು: ನಗರದಲ್ಲಿ ಸುಡುತ್ತಿರುವ ಬಿಸಿಲ ನಡುವೆ ಲೋಕಸಭಾ ಚುನಾವಣೆ ಪ್ರಚಾರದ ಕಾವು ರಂಗೇರುತ್ತಿದೆ.
ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಭಾನುವಾರ ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಿಂದ ಭರ್ಜರಿ ಪ್ರಚಾರ ನಡೆಯಿತು.
ಮತದಾರರ ಮನವೊಲಿಸಲು ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ಬಿರುಬಿಸಿಲಿನಲ್ಲೂ ಬೆವರು ಹರಿಸಿದರು. ಕಸರತ್ತು ನಡೆಸಿದರು.
ಕೋಲಾರ ಜಿಲ್ಲೆಯ ಕುರುಡುಮಲೆಯಲ್ಲಿ ಶನಿವಾರ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಮುಖ್ಯಮಂತ್ರಿ ಅವರು ನಗರದ ಹಲವೆಡೆ ರೋಡ್ ಶೋ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ, ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ನಿವಾಸಿಗಳ ಸಭೆ ನಡೆಸಿ ಮತಯಾಚಿಸಿದರು.
ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬಾಗಲಗುಂಟೆಯಲ್ಲಿ ಪ್ರಚಾರ ಕೈಗೊಂಡಿದ್ದರು. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಜಯನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಪಾರ್ಟ್‌ಮೆಂಟ್, ಉದ್ಯಾನಗಳಲ್ಲಿ ಮತಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.