ADVERTISEMENT

ಬೆಳಗಾವಿ-ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಅನಿರೀಕ್ಷಿತ, ಅಚ್ಚರಿ, ಆಘಾತಗಳೇ ‘ಫಲಿತಾಂಶ’

ಮತದಾರನ ಮುಂದೆ ನಡೆಯದ ರಾಜಕೀಯ ಆಟ; ವರ್ಷದ ಹಿಂದಿನ ನಿರ್ಧಾರ ಬದಲಿಸಿದ ಜನ

ಸಂತೋಷ ಈ.ಚಿನಗುಡಿ
Published 6 ಜೂನ್ 2024, 4:11 IST
Last Updated 6 ಜೂನ್ 2024, 4:11 IST
<div class="paragraphs"><p>ಬೈಲಹೊಂಗಲದಲ್ಲಿ ಮತದಾನಕ್ಕೆ ನಿಂತ ಮಹಿಳೆಯರು</p></div>

ಬೈಲಹೊಂಗಲದಲ್ಲಿ ಮತದಾನಕ್ಕೆ ನಿಂತ ಮಹಿಳೆಯರು

   

(ಸಂಗ್ರಹ ಚಿತ್ರ)

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಆನೆ ಬಲ!  ಬಿಜೆಪಿ ಶಾಸಕರು ಇದ್ದ ಕಡೆ ಕಾಂಗ್ರೆಸ್‌ ಅಭ್ಯರ್ಥಿ; ಕಾಂಗ್ರೆಸ್‌ ಶಾಸಕರು ಇರುವ ಕಡೆಗೆ ಬಿಜೆಪಿ ಅಭ್ಯರ್ಥಿಗೆ ಬಹುಮತ..!

ADVERTISEMENT

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಮತದಾರ ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಕೇವಲ ಒಂದು ವರ್ಷದ ಹಿಂದೆ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಭರ್ಜರಿಯಾಗಿ ಗೆಲ್ಲಿಸಿದ ಮತದಾರ; ಈಗ ಮನಸ್ಸು ಬದಲಿಸಿದ್ದಾನೆ.

ಮತದಾರ ಆಡುವ ಚದುರಂಗದಾಟದ ಮುಂದೆ ಯಾರೆಲ್ಲರೂ ತಲೆ ಬಾಗಲೇಬೇಕು. ಮತದಾರ ಮನಸ್ಸು ಮಾಡಿದರೆ ಹೆಗಲ ಮೇಲೆ ಹೊತ್ತು ಮೆರೆಯಬಲ್ಲ. ಮನಸ್ಸು ತೆಗೆದರೆ ಹೆಗಲೇರಿ ಕಾಡಬಲ್ಲ ಎಂಬುದಕ್ಕೆ ಈ ಚುನಾವಣೆ ನಿದರ್ಶನವಾಯಿತು.

ಬೆಳಗಾವಿ– ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ತಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕಡೆ ಕಾಂಗ್ರೆಸ್‌– ಮೂರು ಕಡೆ ಬಿಜೆಪಿ ಶಾಸಕರಿದ್ದಾರೆ. ಮತದಾರ ಎರಡೂ ಕಡೆಗೆ ಕಾಂಗ್ರೆಸ್‌ ಅನ್ನು ಪ್ರಬಲ ಶಕ್ತಿಯಾಗಿ ಬೆಳೆಸಿದ್ದಾನೆ. ಇದಾಗಿ ಒಂದೇ ವರ್ಷ ಆಗಿದ್ದರಿಂದ ಮತದಾರನ ಮನಸ್ಸು ಇನ್ನೂ ಹಸಿಯಾಗಿದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿತ್ತು. ಆದರೆ, ತರ್ಕ ತಲೆ ಕೆಳಗಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಕಾಂಗ್ರೆಸ್‌ ‘ಕೈ’ ಬಿಟ್ಟಿದ್ದೇಕೆ: ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಂತಮ್ಮ ಕ್ಷೇತ್ರಗಳಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ. ಈ ಮೂರು ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದರಿಂದ ಅಲ್ಲಿ ಜಗದೀಶ ಶೆಟ್ಟರ್‌ ಅವರಿಗೆ ‘ಲೀಡ್‌’ ಸಿಕ್ಕಿದ್ದು ಅಚ್ಚರಿಯೇನಲ್ಲ.

ಆದರೆ, ಕಾಂಗ್ರೆಸ್‌ ಶಾಸಕರಿರುವ ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೈಲಹೊಂಗಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಭಾರಿ ಮುನ್ನಡೆ ಸಿಕ್ಕಿದೆ. ಇನ್ನೂ ಅಚ್ಚರಿಯೆಂದರೆ ಈ ಮೂರೂ ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯವೇ ದೊಡ್ಡ ಸಂಖ್ಯೆಯಲ್ಲಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಮ್ಮ ಮೈಯಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಎಂದು ಪದೇಪದೇ ಹೇಳಿದರು. ಅದಾಗಿಯೂ ಜನ ಮೃಣಾಲ್‌ ಹೆಬ್ಬಾಳಕರ ಅವರಿಗೆ ಮಣೆ ಹಾಕಲಿಲ್ಲ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50,529 ಮತಮಗಳ ಮುನ್ನಡೆ ಸಿಕ್ಕಿದೆ. ಇದು ಬಿಜೆಪಿಗೆ ಅನಿರೀಕ್ಷಿತ– ಕಾಂಗ್ರೆಸ್ ಆಘಾತ!

ಈ ಕ್ಷೇತ್ರದಲ್ಲಿ ಮರಾಠಾ ಹಾಗೂ ಲಿಂಗಾಯತ ಮತಗಳ ಸಂಖ್ಯೆ ದೊಡ್ಡದು. ಇದೇ ಬಲದಿಂದ ಲಕ್ಷ್ಮಿ ಹೆಬ್ಬಾಳಕರ ಕೂಡ ಎರಡುಬಾರಿ ಗೆದ್ದರು. ಆದರೆ, ಲೋಕಸಭೆ ವಿಚಾರ ಬಂದಾಗ ಜನ ನಿಲುವು ಬದಲಾಯಿಸಿದರು.

‘ಲಕ್ಷ್ಮಿ ಹೆಬ್ಬಾಳಕರ ಮನೆಮಗಳು ಅಂತ ಬಂದಾಗ ಗೆಲ್ಲಿಸೇವರಿ. ಮಿನಿಸ್ಟರ್‌ ಮಾಡೇವರಿ. ಈಗ ಮೋದಿ ದೇಶವೇ ನನ್ನ ಪರಿವಾರ ಅನ್ನಾತಾನ. ಅವಗ ವೋಟ್‌ ಹಾಕತೇವರಿ’ ಎಂದು ಹೇಳಿದ್ದ ಕಂಗ್ರಾಳಿ ಗ್ರಾಮದ ರೇಣುಕಾ ಪಟಾತ ಅವರ ಮಾತು ಇಲ್ಲಿ ಗಮನಾರ್ಹ. ಇಂಥದ್ದೇ ನಿಲುವನ್ನು ಬಹಳಷ್ಟು ಮತದಾರರೂ ತಳೆದಿರಬಹುದು.

ಬೈಲಹೊಂಗಲ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್‌ನ ಪ್ರಬಲ ನಾಯಕ ಶಂಕರ ಮಾಡಲಗಿ ಅವರ ಒಗ್ಗಟ್ಟು ಅಲ್ಲಿ ಶೆಟ್ಟರ್‌ ಮುನ್ನಡೆಗೆ ಕಾರಣವಾಯಿತು. ಈ ಮೂವರ ನಡುವಿನ ಗುದ್ದಾಟವೇ ಶಾಸಕ ಮಹಾಂತೇಶ ಕವಟಗಿಮಠ ಅವರಿಗೆ ಗೆಲುವು ತಂದಿದ್ದನ್ನು ಬಿಜೆಪಿಗರು ಅರ್ಥ ಮಾಡಿಕೊಂಡಿದ್ದರು. ಈ ಬಾರಿ ಹೊಸ ಗಾಳ ಉರುಳಿಸಿದರು.

‘ಜಗದೀಶ ಶೆಟ್ಟರ್ ಕಾಂಗ್ರೆಸ್‌ನಲ್ಲಿದ್ದಾಗ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತರ ಸಮಾವೇಶ ಮಾಡಿದ್ದರು. ಶಾಸಕ ಆಸೀಫ್‌ ಸೇಠ್‌ ಅವರನ್ನು ಗೆಲ್ಲಿಸಲು ಶ್ರಮಿಸಿದ್ದರು. ಈಗ ಅದಕ್ಕೆ ಪ್ರತಿಫಲ ಸಿಕ್ಕಿದೆ’ ಎಂಬ ಮಾತೂ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿದೆ.

ಚಿಕ್ಕೋಡಿ ಲೆಕ್ಕಾಚಾರವೂ ಉಲ್ಟಾ: ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಶಾಸಕಿಯಾಗಿದ್ದರೂ ಕಾಂಗ್ರೆಸ್‌ಗೆ 29,752 ಮತಗಳ ಮುನ್ನಡೆ ಸಿಕ್ಕಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಶಾಸಕಿಯ ಪತಿಗೆ ‘ಲೀಡ್‌’ ಕೊಡಿಸಲು ಸಾಧ್ಯವಾಗಲಿಲ್ಲ! ಕ್ಷೇತ್ರದ ಮೇಲೆ ಬಿಗಿ ಹಿಡಿದ ಹೊಂದಿದ ಜೊಲ್ಲೆ ಕುಟುಂಬವನ್ನು ಜನ ತಿರಸ್ಕರಿಸಿದರು.

ಕಾರ್ಯಕರ್ತರೊಂದಿಗೆ ಬೆರೆಯದಿರುವುದು, ಸ್ಥಳೀಯ ನಾಯಕರನ್ನು ಒಲಿಸಿಕೊಳ್ಳುವ ಕನಿಷ್ಠ ಯತ್ನ ಮಾಡದಿರುವುದು, ಜನರಿಗೆ ಸುಲಭವಾಗಿ ಸಿಗದಿರುವುದು, ಸಮುದಾಯಗಳಿಗೆ ಪ್ರಾಮುಖ್ಯತೆ ನೀಡದಿರುವುದು ಹೀಗೆ ಹಲವು ಕಾರಣಗಳನ್ನು ಅಣ್ಣಾಸಾಹೇಬ ಜೊಲ್ಲೆ ಸೋಲಿಗೆ ನೀಡಲಾಗುತ್ತಿದೆ.

‘ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಣ್ಣಾಸಾಹೇಬ ಅವರ ಮಧ್ಯೆ ಒಂದು ಸಾಮ್ಯತೆ ಇದೆ. ಅವರು ಮತದಾರನಿಗಿಂತ ಹೆಚ್ಚು ವಿಶ್ವಾಸವನ್ನು ತಮ್ಮ ಮೇಲೇ ಇಟ್ಟುಕೊಂಡರು’ ಎಂಬುದು ಹಿರಿತಲೆಗಳ ವಿಶ್ಲೇಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.