ADVERTISEMENT

ಕಡುಬೇಸಿಗೆಯಲ್ಲೂ ಮತಬೇಟೆ ಕಸರತ್ತು.. ಉದ್ಯಾನದಲ್ಲಿ ಸುತ್ತಾಟ, ರೋಡ್ ಶೋ ಅಬ್ಬರ

ಕಡುಬೇಸಿಗೆಯಲ್ಲೂ ‘ಮತಬೇಟೆ ಕಸರತ್ತು’, ಅಲ್ಲಲ್ಲಿ ಸಮಸ್ಯೆ ಹೇಳಿಕೊಂಡ ಜನರು

ಆದಿತ್ಯ ಕೆ.ಎ
Published 16 ಏಪ್ರಿಲ್ 2024, 20:33 IST
Last Updated 16 ಏಪ್ರಿಲ್ 2024, 20:33 IST
ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಕುಮಾರಕೃಪಾ ಉದ್ಯಾನದಲ್ಲಿ ವಾಯು ವಿಹಾರಿಗಳ ಜತೆಗೆ ಚರ್ಚಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಕುಮಾರಕೃಪಾ ಉದ್ಯಾನದಲ್ಲಿ ವಾಯು ವಿಹಾರಿಗಳ ಜತೆಗೆ ಚರ್ಚಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ನಗರದ ಚಿಕ್ಕಲಾಲ್‌ಬಾಗ್‌ (ಲೋಕಮಾನ್ಯ ತಿಲಕ್‌ ಉದ್ಯಾನ)ನಲ್ಲಿ ಕೇಸರಿ ಶಾಲು ಧರಿಸಿ ಕೈಯಲ್ಲಿ ಕರಪತ್ರ ಹಿಡಿದ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಗಡಿಯಾರದಲ್ಲಿ ಏಳಕ್ಕೆ ಎರಡು ನಿಮಿಷ ಬಾಕಿ ಇರುವಂತೆಯೇ, ಕೇಸರಿ ಬಣ್ಣದ ಕಮಲದ ಚಿತ್ರವಿದ್ದ ವಾಹನದಲ್ಲಿ ಬಂದಿಳಿದರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು.

‘ಜೈ ಶ್ರೀರಾಮ್‌‘ ಘೋಷಣೆಯೊಂದಿಗೆ ಕಾರ್ಯಕರ್ತರು ಮೋಹನ್ ಅವರನ್ನು ಸ್ವಾಗತಿಸಿದರು. ಅರೆಕ್ಷಣವೂ ತಡ ಮಾಡದೇ, ‘ಹೋಗೋಣ್ವಾ..‘ ಎನ್ನುತ್ತಾ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟರು ಮೋಹನ್‌. ತುಳಸಿತೋಟದ ತುಂಬಾ ಓಡಾಡಿ ಮತಬೇಟೆ ನಡೆಸಿದರು. ಬೆಂಗಳೂರು ಕೇಂದ್ರ ವಿಭಾಗದ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ ಅವರಿಗೆ ಸಾಥ್‌ ನೀಡುತ್ತಿದ್ದರು. ಇದೇ ಕ್ಷೇತ್ರದ ವ್ಯಾಪ್ತಿಗೆ ಚಿಕ್ಕಲಾಲ್‌ಬಾಗ್‌(ಲೋಕಮಾನ್ಯ ತಿಲಕ್‌ ಉದ್ಯಾನ) ಸೇರುತ್ತದೆ.

ಬೆಂಗಳೂರು ಕೇಂದ್ರ ಕ್ಷೇತ್ರವು 2009ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮೋಹನ್ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿದ್ದಾರೆ. ಈ ಬಾರಿಯೂ ಗೆಲುವಿನ ನಾಗಾಲೋಟ ಮುಂದುವರಿಸುವ ತವಕ ಅವರದ್ದು. ಅದೇ ಹುಮ್ಮಸ್ಸಿನಲ್ಲಿ ಅಖಾಡ ಸಜ್ಜುಗೊಳಿಸುತ್ತಿರುವುದು ಅವರೊಂದಿಗೆ ನಡೆಸಿದ ಸುತ್ತಾಟದ ವೇಳೆ ಕಾಣಿಸಿತು.

ADVERTISEMENT

ಕಡುಬೇಸಿಗೆಯ ಕಾರಣಕ್ಕೆ ಮಂಗಳವಾರ ಬೆಳಿಗ್ಗೆ ಉದ್ಯಾನದಲ್ಲಿ ವಾಯುವಿಹಾರಿಗಳ ಸಂಖ್ಯೆಯೂ ಹೆಚ್ಚೇ ಇತ್ತು. ಅಲ್ಲದೇ ಅದೇ ಉದ್ಯಾನದಲ್ಲಿ ಸ್ಪರ್ಶ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹ ಆಯೋಜಿಸಿದ್ದರಿಂದ ಗಡಿಬಿಡಿ ವಾತಾವರಣ ಇತ್ತು.‌

ವೃದ್ದರು, ಮಹಿಳೆಯರು ಆರೋಗ್ಯ ತಪಾಸಣೆಗಾಗಿ ಸರದಿಯಲ್ಲಿ ನಿಂತಿದ್ದರು. ಅವರನ್ನೂ ಭೇಟಿ ಮಾಡಿದ ಮೋಹನ್ ಮತಯಾಚಿಸಿದರು. ಅಲ್ಲೇ ಸಿಕ್ಕಿದ ಬೇರೆ ಜಿಲ್ಲೆಯ ಮತದಾರನ್ನು ಮಾತನಾಡಿಸಿದರು. ಅವರು, ‘ನಮ್ಮ ವೋಟ್ ಇಲ್ಲಿ ಇಲ್ರಿ’ ಎಂದಾಗ, ದಾವಣಗೆರೆಯಲ್ಲಿ ನಮ್ಮ ಅಕ್ಕ ಸ್ಪರ್ಧಿಸಿದ್ದಾರೆ. ಅವರನ್ನು ಬೆಂಬಲಿಸಿ ಕೋರಿದರು. 

ವಿವಿಧ ಭಾಷೆ, ಸಮುದಾಯ, ಧರ್ಮದ ಜನರು ಈ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಯೂರಿರುವ ಕಾರಣಕ್ಕೆ ಇದನ್ನು ‘ರಾಜಧಾನಿಯ ಮಿನಿ ಇಂಡಿಯಾ’ ಎಂದೇ ಕರೆಯಲಾಗುತ್ತಿದೆ. ಉದ್ಯಾನದಲ್ಲಿದ್ದ ವಿವಿಧ ಭಾಷಿಕರನ್ನು ಅವರದೇ ಭಾಷೆಯಲ್ಲಿ ಮಾತನಾಡಿಸಿ ಮತಸೆಳೆಯುವ ಪ್ರಯತ್ನ ಮಾಡಿದರು.

ಲೋಕಮಾನ್ಯ ತಿಲಕ್‌ ಸ್ಪೋರ್ಟ್ಸ್‌ ಕ್ಲಬ್‌ನ ಒಳಾವರಣಕ್ಕೆ ತೆರಳುವುದಕ್ಕೂ ಮೊದಲು ಎದುರಾದ ಕೃಪಾ ಎಂಬುವರು ಮೋಹನ್ ಎದುರು ಕ್ಷೇತ್ರದ ಕೆಲವು ಸಮಸ್ಯೆಗಳ ಕುರಿತು ಗಮನ ಸೆಳೆದರು.

ಸುತ್ತಮುತ್ತಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 12 ಕೊಳವೆಬಾವಿ ಕೊರೆಸಲಾಗಿದೆ ಎಂದು ಅವರನ್ನೂ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು ಅಭ್ಯರ್ಥಿ.

‘ಬಿಬಿಎಂಪಿಯಲ್ಲಿ ಸದಸ್ಯರಿಲ್ಲದೇ ಜನರಿಗೂ ಸಮಸ್ಯೆ ಆಗುತ್ತಿದೆ. ಬಿಬಿಎಂಪಿ ಮಾಡಬೇಕಿರುವ ಕೆಲಸಗಳನ್ನೂ ಜನರು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಆದಷ್ಟು ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳುತ್ತಲೇ ಮುಂದಕ್ಕೆ ಹೆಜ್ಜೆಹಾಕಿದರು.

ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಕ್ಷಣಕಾಲ ಬ್ಯಾಡ್ಮಿಂಟನ್‌ ಆಡಿ ಚುನಾವಣಾ ಕೆಲಸದ ಒತ್ತಡದ ಕಡಿಮೆ ಮಾಡಿಕೊಂಡರು. ನಂತರ, ಕುಮಾರಕೃಪಾ ಪಾರ್ಕ್‌ಗೆ ತೆರಳಿ, ಅಲ್ಲಿಯೂ ತಮ್ಮ ಅವಧಿಯಲ್ಲಿ ನಡೆದ ಕೆಲಸ ಕಾರ್ಯಗಳನ್ನು ತಿಳಿಸಿದರು. ಅಲ್ಲಿಯೂ ಜನರು ಸಮಸ್ಯೆಗಳ ಬೆಳಕು ಚೆಲ್ಲಿದರು. ಅಲ್ಲಿಂದ ಮುಂದಕ್ಕೆ ಸಾಗಿ ಶಿವಾನಂದ ವೃತ್ತದ ಬಳಿಯ ಹೋಟೆಲ್‌ವೊಂದರಲ್ಲಿ ಬೆಂಬಲಿಗರ ಜೊತೆಗೆ ತಿಂಡಿ ಸೇವಿಸಿದರು.

ಅದಾದ ಮೇಲೆ ಸಿವಿ ರಾಮನ್‌ನಗರದತ್ತ ಮೋಹನ್ ಪ್ರಯಾಣ ಬೆಳೆಸಿ ಅಲ್ಲಿ ರೋಡ್‌ ಶೋ ನಡೆಸಿದರು. ಅಲ್ಲಿ ಪ್ರಚಾರದ ಅಬ್ಬರವಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ಊಟ ಮಾಡಿದರು. ಸಂಜೆ ಕಾರ್ಯಕರ್ತರ ಹಾಗೂ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸುತ್ತಲೇ ಗೆಲುವಿಗಾಗಿ ‘ಕಾರ್ಯತಂತ್ರ’ ರೂಪಿಸಿದರು.

ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಕುಮಾರಕೃಪಾ ಉದ್ಯಾನದಲ್ಲಿ ವಾಯು ವಿಹಾರಿಗಳ ಜತೆಗೆ ಚರ್ಚಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಉಪ ನಗರ ರೈಲು ಯೋಜನೆ ತಂದ ತೃಪ್ತಿ

ಪ್ರಚಾರದ ವೇಳೆ ಮಾತಿಗೆ ಸಿಕ್ಕಿದ ಮೋಹನ್‌ ಅವರು ‘15 ವರ್ಷಗಳಿಂದಲೂ ಜನರಿಗೆ ಸಿಗುವ ಸಂಸದ ಆಗಿದ್ದೇನೆ. ಕೇಂದ್ರ ಸರ್ಕಾರವು ಬೆಂಗಳೂರಿಗೆ ₹1.30 ಲಕ್ಷ ಕೋಟಿ ಅನುದಾನ ನೀಡಿದೆ. ನನ್ನ ಕ್ಷೇತ್ರದಲ್ಲಿ ಮೆಟ್ರೊ ಮಾರ್ಗ ವಿಸ್ತರಣೆ ಆಗಿದೆ. ಉಪ ನಗರ ರೈಲ್ವೆ ಯೋಜನೆ ತಂದಿರುವುದು ಖುಷಿ ಹಾಗೂ ತೃಪ್ತಿ ತಂದಿದೆ. ಉಪನಗರ ರೈಲು ಅನುಷ್ಠಾನದಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಈ ಕ್ಷೇತ್ರದಲ್ಲಿ ₹ 1ಸಾವಿರ ಕೋಟಿ ಅನುದಾನದಲ್ಲಿ ಸ್ಮಾರ್ಟ್‌ಸಿಟಿ ಕೆಲಸಗಳು ನಡೆದಿವೆ’ ಎಂದು ಪ್ರತಿಕ್ರಿಯಿಸಿದರು. ‘ಜೆಡಿಎಸ್‌ ಮೈತ್ರಿಯಿಂದ ಬಲ ಹೆಚ್ಚಾಗಿದೆ. ಸಮನ್ವಯತೆಯಿಂದ ಪ್ರಚಾರ ನಡೆಯು‌ತ್ತಿದೆ. ಎದುರಾಳಿ ಅಭ್ಯರ್ಥಿ ಕೈಯಲ್ಲಿ ಸಾಧನೆಯ ಪುಸ್ತಕವಿಲ್ಲವೇ ಇಲ್ಲ’ ಎಂದು ಹೇಳಿದರು.

ಬೆಳಿಗ್ಗೆ 6ಕ್ಕೆ ಆರಂಭ

‘ಬೆಂಗಳೂರು ಕೇಂದ್ರ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಾಹೇಬ್ರು ಬೆಳಿಗ್ಗೆ 6ಕ್ಕೆ ಮನೆಬಿಟ್ಟರೆ ರಾತ್ರಿ 11.30ಕ್ಕೆ ಮನೆ ಸೇರುತ್ತಿದ್ಧಾರೆ. ದೂರುಗಳು ಬಂದರೆ ಅಲ್ಲಿಯೇ ಪಟ್ಟಿ ಮಾಡಿಕೊಳ್ಳುತ್ತಾರೆ. ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಕೆಲಸಗಳ ಕುರಿತ ಕರಪತ್ರವನ್ನೂ ಹಂಚುತ್ತಿದ್ದಾರೆ’ ಎಂದು ಬೆಂಬಲಿಗರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.