ADVERTISEMENT

ಲೋಕಸಭೆ ಚುನಾವಣೆ | ‘ಗ್ಯಾರಂಟಿ’ಗಳ ನಡುವೆ ಜಂಗೀಕುಸ್ತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 0:53 IST
Last Updated 21 ಮಾರ್ಚ್ 2024, 0:53 IST
<div class="paragraphs"><p>ಬಿಜೆಪಿ–ಕಾಂಗ್ರೆಸ್‌</p></div>

ಬಿಜೆಪಿ–ಕಾಂಗ್ರೆಸ್‌

   

ಬೆಂಗಳೂರು: ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಜಾರಿ ಮಾಡಿರುವ ಜನಪರ ಯೋಜನೆಗಳು ಮತ್ತು ಸಾಧನೆಗಳ ಪಟ್ಟಿ ‘ಮೋದಿ ಗ್ಯಾರಂಟಿ’ಯನ್ನು ಹಿಡಿದುಕೊಂಡು ಪ್ರತಿ ಮತದಾರನ ಮನೆಗೂ ಹೋಗಲು ಬಿಜೆಪಿ ತಯಾರಿ ನಡೆಸಿದೆ.

ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಜನರ ಮನೆಯಂಗಳಕ್ಕೇ ಹೋಗಿ ಚರ್ಚೆಯ ಮೂಲಕ ಜನರಿಗೆ ಕೇಂದ್ರದ ಯೋಜನೆಗಳ ಮೂಲಕ ಆಗುತ್ತಿರುವ ಪ್ರಯೋಜನಗಳು, ಅದರಿಂದ ಜನ ಜೀವನದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ವಿವರಿಸಲಾಗುವುದು ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್‌ ತಿಳಿಸಿದರು.

ADVERTISEMENT

‘ಮೋದಿ ಗ್ಯಾರಂಟಿಗಳು ಚೀಪ್‌ ಗಿಮಿಕ್‌ಗಳಲ್ಲ, ಸೌದೆ, ಸೀಮೆ ಎಣ್ಣೆ ಸ್ಟೌವ್ ಬಳಸುತ್ತಿದ್ದ ಬಡ ಕುಟುಂಬಗಳಿಗೆ ಉಜ್ವಲ ಮೂಲಕ ಉಚಿತ ಅಡುಗೆ ಅನಿಲ, ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು, ಶೌಚಾಲಯ, ಪಕ್ಕಾ ಮನೆ, ಆಯುಷ್ಮಾನ್‌ ಭಾರತ್‌ ಕಾರ್ಡ್‌, ಕಡಿಮೆ ಬೆಲೆಗೆ ಔಷಧ ವಿತರಣೆ ಮಳಿಗೆಗಳು, ಪರಿಶಿಷ್ಟ ಜಾತಿ ವರ್ಗದವರು ಉದ್ದಿಮೆದಾರರಾಗಲು ಮುದ್ರಾ ಯೋಜನೆ, ಪ್ರತಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ, ಡಿಬಿಟಿ ಮೂಲಕ ಹಣಪಾವತಿ ಹೀಗೆ ಹಲವು ಯೋಜನೆಗಳ ಲಾಭದಿಂದ ಬಡವರ ಜೀವನವೇ ಬದಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ವಿತರಿಸಲಾಯಿತು. ಈ ಅಂಶಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲಾಗುವುದು ಎಂದರು.

ಈ ಎಲ್ಲ ಯೋಜನೆಗಳ ಬಗ್ಗೆ, ಇವುಗಳಿಂದ ಪ್ರತಿಯೊಂದು ಕುಟುಂಬಕ್ಕೆ ಆಗುತ್ತಿರುವ ಲಾಭದ ಪ್ರಮಾಣವನ್ನು ವಿವರಿಸಲಾಗುವುದು. ಕೇಂದ್ರದ ಯೋಜನೆಗಳು ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಿಂತಲೂ ಎಷ್ಟು ಭಿನ್ನ ಮತ್ತು ಪ್ರಯೋಜನಕಾರಿ ಎಂಬುದನ್ನು ವಿವರಿಸಲಾಗುವುದು. ಕರ್ನಾಟಕ ಸರ್ಕಾರದ ಗ್ಯಾರಂಟಿಯ ಅವಾಂತರ ಗಳನ್ನು ರಾಜ್ಯದ ಜನರೂ ನೋಡಿದ್ದಾರೆ. ಅದನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ವಿವರಿಸಲಾಗುವುದು. ಏಪ್ರಿಲ್ 5ರೊಳಗೆ ಮನೆ ಮನೆ ತಲುಪುವ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ಸುನಿಲ್‌ ಹೇಳಿದರು.

ಇದಕ್ಕೆ ಪೂರಕವಾಗಿ ಪ್ರತಿಯೊಂದು ಮಂಡಲದ ಮಟ್ಟದಲ್ಲೂ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಪ್ರಕೋಷ್ಠಗಳ ಮೂಲಕ ನಗರ ಪ್ರದೇಶಗಳಲ್ಲಿ ವಿವಿಧ ವರ್ಗಗಳನ್ನು ಸಂಪರ್ಕಿಸಿ ಸರ್ಕಾರದ ಸಾಧನೆಗಳನ್ನು ವಿವರಿಸಲಾಗುವುದು. ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ ಮತ್ತು ಗೇಟೆಡ್‌ ಕಮ್ಯುನಿಟಿ ಇರುವಲ್ಲೂ ಮತದಾರರನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.

10 ಕಡೆ ಮೋದಿ ಸಮಾವೇಶ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಅಬ್ಬರ ಪ್ರಚಾರ ನಡೆಸಲು ಬಿಜೆಪಿ ಘಟಕ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ 10 ಬೃಹತ್ ಸಮಾವೇಶಗಳನ್ನು ನಡೆಸಲಿದ್ದಾರೆ. ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ರಾಜ್ಯದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್‌ ನಾಯಕರನ್ನೂ ತೊಡಗಿಸಿಕೊಳ್ಳಲಾಗುವುದು. ಪ್ರಧಾನಿಯವರ ಕೆಲವು ಸಮಾವೇಶಗಳಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಲಾಗುವುದು. ಯಾವ ಕ್ಷೇತ್ರಗಳು ಮತ್ತು ಯಾವ ದಿನಾಂಕ ಎಂಬುದು ನಿರ್ಧಾರ ಆಗಬೇಕಾಗಿದೆ ಎಂದು ವಿ.ಸುನಿಲ್‌ಕುಮಾರ್‌ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆಗಿನ
ಸಮನ್ವಯತೆಗಾಗಿ ಎರಡು ಪಕ್ಷಗಳ ಇಬ್ಬರು ನಾಯಕರನ್ನು ಒಳಗೊಂಡ ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೇ, ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ಪರಿಣಾಮಕಾರಿಯಾಗಿ ವರ್ಗಾಯಿಸುವ ಸಂಬಂಧ ಪಕ್ಷದ ಪ್ರಮುಖ ನಾಯಕರು ಪ್ರತಿಯೊಂದು ಕ್ಷೇತ್ರದಲ್ಲೂ ಪಕ್ಷದ ಕಾರ್ಯಕರ್ತರ ಜತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲೂ ಗೊಂದಲಗಳು ನಿವಾರಣೆ ಆಗಲಿದೆ ಎಂದು ಸುನಿಲ್‌ಕುಮಾರ್‌ ವಿವರಿಸಿದರು.

ಮತ ಸೆಳೆಯಲು ‘ಕೈ’ ತಂತ್ರ

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯಲ್ಲಿ ಜನಬೆಂಬಲ ಗಳಿಸುವ ಪ್ರಬಲ ಅಸ್ತ್ರಗಳನ್ನಾಗಿ ಬಳಸಲು ಕಾಂಗ್ರೆಸ್‌ ಮುಂದಾಗಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡೇ ಮತ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದೆ.

ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಅನ್ನ ಭಾಗ್ಯ ಯೋಜನೆಗಳ ಫಲಾನುಭವಿಗಳನ್ನು ಮನವೊಲಿಸಿ ಮತಗಳಾಗಿ ಪರಿವರ್ತಿಸುವ ಚಿಂತನೆ ಕಾಂಗ್ರೆಸ್‌ ಪಾಳೆಯದಲ್ಲಿ ಜೋರಾಗಿ ನಡೆದಿದೆ. ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಫಲಾನುಭವಿಗಳ ದತ್ತಾಂಶವನ್ನು ಆಧರಿಸಿ ‘ಗ್ಯಾರಂಟಿ’ ಪ್ರಚಾರ ಕಾರ್ಯತಂತ್ರ ಸಿದ್ಧಪಡಿಸಲಾಗುತ್ತಿದೆ.

2023ರ ವಿಧಾನಸಭಾ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ ಗ್ಯಾರಂಟಿಗಳ ಬಲವನ್ನು ನೆಚ್ಚಿಕೊಂಡು ಲೋಕಸಭಾ ಚುನಾವಣೆಯಲ್ಲಿ ಗುರಿ ತಲುಪುವ ಯೋಚನೆ ಕಾಂಗ್ರೆಸ್‌ ನಾಯಕರಲ್ಲಿದೆ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಯುವಜನರು. ಈ ಎರಡೂ ವರ್ಗಗಳ ಮತದಾರರನ್ನು ಗ್ಯಾರಂಟಿಗಳ ಮೂಲಕವೇ ‘ಹಸ್ತ’ದತ್ತ ಸೆಳೆಯಲು ‘ಗ್ಯಾರಂಟಿ’ ಅಸ್ತ್ರವನ್ನು ಚುನಾವಣಾ ಪ್ರಚಾರದುದ್ದಕ್ಕೂ ಪದೇ ಪದೇ ಪ್ರಸ್ತಾಪಿಸಲು ತೀರ್ಮಾನಿಸಿದೆ.

ಗ್ಯಾರಂಟಿ ಯೋಜನೆಗಳ ಕುರಿತು ಲೋಕಸಭಾ ಚುನಾವಣೆ ಅಧಿಸೂಚನೆ ಹೊರಬೀಳುವ ಮುನ್ನ ಅಂಗನವಾಡಿ ಕಾರ್ಯಕರ್ತರ ಮೂಲಕ ರಾಜ್ಯದಾದ್ಯಂತ ಸಮೀಕ್ಷೆ ನಡೆಸಲಾಗಿತ್ತು. 1.14 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸಮೀಕ್ಷೆಯ ವರದಿ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಈ ವರದಿಯನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ನೇತೃತ್ವದಲ್ಲೇ ಈವರೆಗೆ ಗ್ಯಾರಂಟಿ ಯೋಜನೆ ಫಲಾನುಭವಿಗಳ 565 ಸಮಾವೇಶ
ಗಳನ್ನು ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 25, ತಾಲ್ಲೂಕು ಮಟ್ಟದಲ್ಲಿ 140 ಮತ್ತು ಹೋಬಳಿ ಮಟ್ಟದಲ್ಲಿ 400 ಸಮಾವೇಶಗಳನ್ನು ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.