ಬೆಂಗಳೂರು: 'ಬೆಂಗಳೂರಿನಲ್ಲಿ ‘ಜೈ ಶ್ರೀರಾಮ್’ ಘೋಷಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ವಹಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಪ್ರತಿಭಟಿಸಲಾಗುವುದು' ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಿದ್ದರಾಮಯ್ಯನವರ ಸರ್ಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು, ಪಾಕಿಸ್ತಾನ ಬೆಂಬಲಿತರು, ಟಿಪ್ಪು ಸಿದ್ಧಾಂತವಾದಿಗಳು ಹೆಚ್ಚಿದ್ದಾರೆ. ಭಯೋತ್ಪಾದನೆ ಹಾಗೂ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯುತ್ತಿರುವುದು ಬಹಳ ಆತಂಕಕಾರಿ' ಎಂದು ಹೇಳಿದರು.
'ಇಡೀ ದೇಶದಲ್ಲಿ ಶ್ರೀರಾಮ ನವಮಿ ಆಚರಣೆ ಮಾಡಲಾಗಿದೆ. ನನ್ನ ಮನೆಯಲ್ಲೂ ರಾಮನವಮಿ ಆಚರಣೆ ಮಾಡುತ್ತೇನೆ. ಆದರೆ, ಜೈ ಶ್ರೀರಾಮ್ ಹೇಳಬಾರದು ‘ಅಲ್ಲಾಹು ಅಕ್ಬರ್’ ಎನ್ನಬೇಕು ಎಂದು ಮುಸ್ಲಿಂ ಮೂಲಭೂತವಾದಿಗಳು ಹಿಂದೂಗಳಿಗೆ ಬೆಂಗಳೂರಿನಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ. ನಾವೀಗ ಪಾಕಿಸ್ತಾನದಲ್ಲಿ ಇದ್ದೀವಾ ಎಂಬ ಅನುಮಾನ ಶುರುವಾಗಿದೆ' ಎಂದು ಕಿಡಿಕಾರಿದರು.
'ಸಿದ್ದರಾಮಯ್ಯ ರಾಜ್ಯವನ್ನು ಇಸ್ಲಾಮಿಕ್ ಮೂಲಭೂತವಾದಿಗಳ ಕೈಗೆ ಧಾರೆ ಎರೆದುಕೊಟ್ಟಿದ್ದಾರೆ. ಹಿರಿಯ ನಾಯಕ ಲಕ್ಷ್ಮಣ ಸವದಿ ಭಾರತಮಾತೆಗೆ ಜೈ ಎನ್ನಲು ಅನುಮತಿ ಕೇಳುತ್ತಾರೆ. ಡಿ.ಕೆ.ಸುರೇಶ್ ತಮ್ಮ ಮನೆಯಲ್ಲಿ ರಾಮನ ಪೂಜೆ ಮಾಡಲ್ಲ ಎನ್ನುತ್ತಾರೆ. ಅವರು ಕಲ್ಲು ಬಂಡೆಯನ್ನೇ ಪೂಜೆ ಮಾಡಲು ಇಟ್ಟುಕೊಳ್ಳಬಹುದು. ರಾಮ ಇಲ್ಲದೆ ಹನುಮನಿಲ್ಲ, ಹನುಮ ಇಲ್ಲದೆ ರಾಮನಿಲ್ಲ. ಇಡೀ ದೇಶದಲ್ಲಿ ಎಲ್ಲ ಕಡೆ ಹನುಮನ ದೇವಸ್ಥಾನವಿದೆ. ಈ ರೀತಿ ಹಿಂದೂಗಳನ್ನು ಅವಹೇಳನ ಮಾಡುತ್ತಿರುವುದರಿಂದಲೇ ಈಗ ರಾಜ್ಯದಲ್ಲಿ ಮುಸ್ಲಿಂ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿದೆ' ಎಂದರು.
'ಹಿಂದೂಗಳು ಕರ್ನಾಟಕದಲ್ಲಿ ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಚಿಕ್ಕಪೇಟೆಯಲ್ಲಿ ಅಂಗಡಿ ಮಾಲೀಕರೊಬ್ಬರು ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಮೂಲಭೂತವಾದಿಗಳ ರಕ್ಷಣೆಗೆ ನಿಂತಿದೆ. ಬಹುಸಂಖ್ಯಾತರ ಹಿಂದೂಗಳನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ' ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
'ಈ ರೀತಿ ಬೆದರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲರಿಗೂ ಕಾಟಾಚಾರಕ್ಕೆ ಪ್ರಕರಣ ದಾಖಲಿಸಿ ನಂತರ ಬಿಡುಗಡೆ ಮಾಡಲಾಗುತ್ತಿದೆ. ಮತಬ್ಯಾಂಕ್‌ಗಾಗಿ ಇಂಥವರನ್ನು ಕಾಪಾಡುವುದು ಮುಂದಿನ ದಿನಗಳಲ್ಲಿ ರಾಜ್ಯಲ್ಲೆ ದೊಡ್ಡ ಅಪಾಯವಾಗಿ ಪರಿಣಮಿಸಲಿದೆ. ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿ ಇರಬೇಕೆಂದೇ ನಾವು ಬಯಸುತ್ತೇವೆ’ ಎಂದರು.
‘ಕಾಂಗ್ರೆಸ್ ಇನ್ನು ಇದು ಸಣ್ಣ ಘಟನೆ ಎಂದು ಹೇಳಲು ಆರಂಭಿಸುತ್ತಿದೆ. ಕೂಡಲೇ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ಸರ್ಕಾರದ ಮೇಲೆ ನಂಬಿಕೆ ಬರಲು ಸಾಧ್ಯ. ಇಲ್ಲವಾದರೆ ಆರಂಭದಿಂದಲೇ ಅವರು ಮಾನಸಿಕ ರೋಗಿಗಳು, ಮಾದಕ ವಸ್ತು ವ್ಯಸನಿಗಳು ಎಂದು ಹೇಳಲು ಆರಂಭಿಸುತ್ತಾರೆ. ಈ ಹಿಂದೆ ಕೆಫೆಯಲ್ಲಿ ಬಾಂಬ್ ಸ್ಪೋಟವಾದಾಗ ಅದು ವೈಯಕ್ತಿಕ ವಿಚಾರ ಎಂದು ತನಿಖೆಯ ದಿಕ್ಕು ತಪ್ಪಿಸಿದ್ದರು’ ಎಂದು ಹೇಳಿದರು.
‘ಸಿದ್ದರಾಮಯ್ಯ ಬಿಜೆಪಿ ಸಂಸದರ ಬಗ್ಗೆ ಮಾತನಾಡುತ್ತಾರೆ. ಆದರೆ, ಡಿ.ಕೆ.ಸುರೇಶ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಏನು ಮಾತಾಡಿದ್ದಾರೆ ಎಂದು ನೋಡಲಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ದರಿದ್ರ ಬಂದಿದೆ. ವಿದ್ಯಾರ್ಥಿವೇತನ, ಸಂಬಳ, ಅಭಿವೃದ್ಧಿಗೆ ಹಣವೂ ಇಲ್ಲ‘ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.