ಹಾಸನ: ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಮಣಿಸಲು ಯೋಜನೆ ರೂಪಿಸುತ್ತಿರುವ ಬಿಜೆಪಿ, ಎಚ್.ಡಿ. ರೇವಣ್ಣ ಅವರ ವಿರುದ್ಧ ಹೊಳೆನರಸೀಪುರದಲ್ಲಿ ಪ್ರೀತಂ ಗೌಡರನ್ನು ಕಣಕ್ಕೆ ಇಳಿಸುವ ಯೋಜನೆ ರೂಪಿಸಿದೆ.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಹಾಗೂ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಆರ್.ಅಶೋಕ್ ಅವರನ್ನು ಕಣಕ್ಕಿಸಿದೆ. ಅದೇ ಮಾದರಿಯಲ್ಲಿ ಎಚ್.ಡಿ. ರೇವಣ್ಣ ಅವರ ವಿರುದ್ಧ ಪ್ರೀತಂ ಗೌಡರನ್ನು ಕಣಕ್ಕೆ ಇಳಿಸುವ ಮೂಲಕ ಜೆಡಿಎಸ್‌ಗೆ ಪ್ರಬಲ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಯೋಜನೆ ಹೆಣೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಂಗೌಡ, ‘ನಮ್ಮ ಪಕ್ಷದ ವರಿಷ್ಠರು ರಣತಂತ್ರ ಮಾಡಿದ್ದಾರೆ. ಆ ತಂತ್ರ ಏನೆಂದು ಇನ್ನೂ ತಿಳಿದಿಲ್ಲ. ಸೂಚನೆ ಬಂದರೆ, ಅದರಂತೆ ನಡೆದುಕೊಳ್ಳುತ್ತೇನೆ. ಕಾದು ನೋಡಿ’ ಎಂದು ಹೇಳಿದ್ದಾರೆ. ಈ ಮೂಲಕ ಹಾಸನ, ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲಿ ಪ್ರೀತಂ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಈ ಮಧ್ಯೆ ಈಗಾಗಲೇ ಹೊಳೆನರಸೀಪುರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ವಕೀಲ ಕೆ. ದೇವರಾಜೇಗೌಡ, ದಿಢೀರ್ ಪತ್ರಿಕಾಗೋಷ್ಠಿ ಕರೆದಿದ್ದು, ಕುತೂಹಲ ಮೂಡಿಸಿದೆ.
‘ಹಾಸನ ಕ್ಷೇತ್ರದಲ್ಲಿ ನನ್ನ ವಿರುದ್ಧ ರೇವಣ್ಣ ಕುಟುಂಬ ಸ್ಪರ್ಧೆ ಮಾಡಿದರೆ 50 ಸಾವಿರ ಮತಗಳ ಅಂತರದಿಂದ ಸೋಲಿಸುತ್ತೇನೆ’ ಎಂದು ಪ್ರೀತಂಗೌಡರು ಸವಾಲು ಹಾಕಿದ್ದರು. ಆದರೆ, ಜೆಡಿಎಸ್‌ನಿಂದ ಸ್ವರೂಪ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಹೀಗಾಗಿ ಪ್ರೀತಂ ಗೌಡರೇ, ಹೊಳೆನರಸೀಪುರಕ್ಕೆ ಹೋಗಿ ರೇವಣ್ಣ ವಿರುದ್ಧ ಸ್ಪರ್ಧೆ ಮಾಡುವ ಮೂಲಕ ಸವಾಲು ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.