ಬೆಳಗಾವಿ: ‘ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎಲ್ಲೆಡೆ ಪ್ರಧಾನಿ ಮೋದಿ ಅವರ ಗಾಳಿ ಬೀಸುತ್ತಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಗೆಲ್ಲುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ. ಅವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ, ನಾನು ಹೋಗಿಲ್ಲ. ನಮ್ಮ ಕುಟುಂಬದವರೊಬ್ಬರು ಅಣ್ಣಾಸಾಹೇಬ ವಿರುದ್ಧ ನಿಂತಿದ್ದಾರೆ ಎಂಬ ಕಾರಣಕ್ಕೆ ಹೋಗಿಲ್ಲ ಎಂದರ್ಥವಲ್ಲ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲೇ ಹೆಚ್ಚು ಕ್ರಿಯಾಶೀಲವಾಗಿದ್ದೇನೆ’ ಎಂದರು.
‘ಜಗದೀಶ ಶೆಟ್ಟರ್ ಹೊರಗಿನವರು ಎನ್ನುವ ಆರೋಪಕ್ಕೆ ಈಗಾಗಲೇ ಅವರೇ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಜಿಲ್ಲೆಯ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ಸ್ವಾಭಿಮಾನ ನೆನಪಾಗುತ್ತದೆ. ಜಗದೀಶ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಈಗ ಈ ವಿಷಯ ಮುಗಿದ ಅಧ್ಯಾಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಲಿಂಗಾಯತ ಅಸ್ತ್ರ ಪ್ರಯೋಗಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ, ‘ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ. ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನರೇಂದ್ರ ಮೋದಿ ಮುಖಕ್ಕೆ ಹೆಚ್ಚಿನ ಗೌರವವಿದೆ. ಜಾತಿ ಕೆಲಸ ಮಾಡುವುದಿಲ್ಲ’ ಎಂದರು.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂದೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ. ಆ ಕನಸು ಈಡೇರಿದರೆ ಒಳ್ಳೆಯದೇ. ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿಯಾದರೆ ನಾವೂ ಖುಷಿಪಡುತ್ತೇವೆ’ ಎಂದರು.
ಜಾರಕಿಹೊಳಿ ಕುಟುಂಬ ರಾಜಕಾರಣದ ಬಗ್ಗೆ ಯತ್ನಾಳ ಕಿಡಿ ಕಾರಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ, ‘ಯತ್ನಾಳ ಅವರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಟೀಕಿಸಿದ್ದಾರೆ. ಇದಕ್ಕೆ ಸಚಿವರೇ ಉತ್ತರಿಸಬೇಕು, ನಾನಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.