ADVERTISEMENT

ನಾಮಪತ್ರ ಹಿಂಪಡೆಯಲು ಜೆಡಿಎಸ್‌ ಅಭ್ಯರ್ಥಿಗೆ ಆಮಿಷ: ಸೋಮಣ್ಣ ವಿರುದ್ಧ ಎಫ್‌ಐಆರ್‌‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2023, 13:28 IST
Last Updated 28 ಏಪ್ರಿಲ್ 2023, 13:28 IST
ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು)
ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು)    

ಚಾಮರಾಜನಗರ: ನಾಮಪತ್ರ ವಾಪಸ್‌ ಪಡೆಯಲು ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ‌‌

ಎಫ್‌ಐಆರ್‌ನಲ್ಲಿ ಸೋಮಣ್ಣ ಅವರಿಗೆ ಸಂಬಂಧಿಸಿದಂತೆ ವಿವರಗಳು ಇಲ್ಲ. ಅಪರಿಚಿತ (ಅನ್‌ನೋನ್‌) ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆಡಿಯೊದಲ್ಲಿ ಕೇಳಿ ಬಂದಿರುವ ಇನ್ನೆರಡು ಹೆಸರುಗಳಾದ ಸುದೀಪ್‌ ಮತ್ತು ನಟರಾಜು ಅವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ.  

ಚುನಾವಣಾ ಫ್ಲೈಯಿಂಗ್‌ ಸ್ಕ್ಯಾಡ್‌ನ ಮ್ಯಾಜಿಸ್ಟ್ರೇಟ್‌ ಡಾ.ಬಿ.ಆರ್‌.ಜಯಣ್ಣ ಅವರು ನೀಡಿರುವ ದೂರಿನ ಆಧಾರದಲ್ಲಿ ಚಾಮರಾಜನಗರ ಪಟ್ಟಣ ಠಾಣೆಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 

ADVERTISEMENT

ಸೋಮಣ್ಣ ಅವರನ್ನು ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದ್ದು, ನಟರಾಜು ಅವರು ಎರಡನೇ ಮತ್ತು ಸುದೀಪ್‌ ಮೂರನೇ ಆರೋಪಿಯಾಗಿದ್ದಾರೆ. 

ನಾಮಪತ್ರ ವಾಪಸ್‌ ಪಡೆಯುವ ದಿನದಂದು ಸಚಿವ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಜೆಡಿಎಸ್‌ನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್‌ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ‘ಸರ್ಕಾರದ ಬರುತ್ತದೆ. ಗೂಟದ ಕಾರು ಕೊಡುತ್ತೇವೆ’ ಎಂದು ಹೇಳಿದ್ದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೋಮಣ್ಣ ಅವರು ಕರೆ ಮಾಡಿದ್ದನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ದೃಢಪಡಿಸಿದ್ದರು.

ತೊಟ್ಟಿ ನನ್ನ ಮಗನ ಮಾತು ಕೇಳಿ ನಿಂತಿದ್ದೀಯಾ...

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಅವರಿಗೆ ಸೋಮಣ್ಣ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೊ ತುಣುಕು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ.'ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೋಡ್ತೀವಿ. ಮೊದಲು ವಾಪಸ್ ತಗೊ. 'ತೊಟ್ಟಿ ನನ್ನ ಮಗನ ಮಾತು ಕೇಳಿ ನಿತ್ತಿದ್ದೀಯಾ. ಮೊದಲು ತೆಗಿ. ಆಮೇಲೆ ಎಲ್ಲ ಮಾತನಾಡೋಣ.ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ಹಿತ ಕಾಪಾಡ್ತೇನೆ' ಎಂದು ಸೋಮಣ್ಣ ಹೇಳುವುದು ಆಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.